August 25, 2026
Tuesday, August 25, 2026
spot_img

ಅನ್ನಭಾಗ್ಯ ಅಕ್ಕಿ ಮಾಫಿಯಾ ಬಯಲಿಗೆಳೆದಿದ್ದಕ್ಕೆ ಗೂಂಡಾಗಿರಿ: ಪತ್ರಕರ್ತನಿಗೆ ಜೀವಬೆದರಿಕೆ, ಇಬ್ಬರ ವಿರುದ್ಧ ಕೇಸ್ ದಾಖಲು

ಹೊಸದಿಗಂತ ವರದಿ ವಿಜಯಪುರ:

ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಅಕ್ಕಿ ಮಾಫಿಯಾ ಕುರಿತು ಹೊಸದಿಗಂತ ಪತ್ರಿಕೆಯಲ್ಲಿ ವಿಶೇಷ ವರದಿ ಬರೆದಿದ್ದಕ್ಕೆ, ಪತ್ರಕರ್ತನ ಮನೆಗೆ ಬಂದು ಗೂಂಡಾ ವರ್ತನೆ ತೋರಿ, ಜೀವಬೆದರಿಕೆ ಹಾಕಿದ ಅಕ್ಕಿ ಮಾಫಿಯಾದ ಆರೋಪಿಗಳಿಬ್ಬರ ವಿರುದ್ಧ ಇಲ್ಲಿನ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿನ ಗುಡುಲಾಲ್ ತುಬಾಕೆ ಹಾಗೂ ಅಲ್ತಾಫ್ ಪುಣೇಕರ ಗೂಂಡಾ ವರ್ತನೆ ತೋರಿದ ಆರೋಪಿಗಳಾಗಿದ್ದಾರೆ.

ಹೊಸ ದಿಗಂತ ಪತ್ರಿಕೆ ಜಿಲ್ಲಾ ವರದಿಗಾರ ಪರಶುರಾಮ ಶಿವಶರಣ ಅವರು,  ಆ.20, 2026 ರ ಸಂಚಿಕೆಯಲ್ಲಿ ‘ಬೇರು ಬಿಟ್ಟ ಅಕ್ರಮ ದಂಧೆಕೋರರ ಜಾಲ, ಕಾಳಸಂತೆಕೋರರಿಂದ ಮಹಾರಾಷ್ಟ್ರಕ್ಕೆ ಸಾಗಣೆ, ಅನ್ನಭಾಗ್ಯ ಅಕ್ಕಿ ಖದೀಮರಿಗೆ ವಿಜಯಪುರ ಸ್ವರ್ಗ’ ಎಂಬ ಶಿರ್ಷಿಕೆಯಡಿ ವಿಶೇಷ ವರದಿ ಬರೆದಿದ್ದರು.

ಈ ಹಿನ್ನೆಲೆ  ಅಕ್ಕಿ ಮಾಫಿಯಾದ ಆರೋಪಿಗಳಾದ ಗುಡುಲಾಲ್ ತುಬಾಕೆ ಹಾಗೂ ಅಲ್ತಾಫ್ ಪುಣೇಕರ ಈ ಇಬ್ಬರು, ಪತ್ರಕರ್ತ ಪರಶುರಾಮ ಶಿವಶರಣ ಮನೆಯಲ್ಲಿ ಇಲ್ಲದ ವೇಳೆ, ಅವರ ನಗರದ ಶಿಕಾರಖಾನೆ ಮನೆಗೆ ಸೋಮವಾರ ಸಂಜೆ 4 ಗಂಟೆಗೆ ಬಂದು, ಗೂಂಡಾ ವರ್ತನೆ ತೋರಿ, ನಮ್ಮ ಅಕ್ಕಿ ಮಾಫಿಯಾ ಬಗ್ಗೆ ಬರೆದ ಪತ್ರಕರ್ತ ಎಲ್ಲಿದ್ದಾನ, ನಾವು ಎಲ್ಲಾ ಆಫೀಸ್ ದವರಿಗೆ ಮಂತ್ಲಿ ಕೊಡತಿವಿ, ನಮ್ಮ ಹಿಂದ ಕೆಲ ರಾಜಕಾರಣಿ ಇದ್ದಾರ, ಲೀಡರ್ ಇದ್ದಾರ, ಹೋರಾಟಗಾರರು ಇದ್ದಾರ ಸುಮ್ನೆ ಧಿಮಾಕ ಮಾಡಬ್ಯಾಡ್ರಿ, ನಿಮ್ದು ಎಷ್ಟ ತಗೊತ್ತೀರಿ ತಗೊಂಡು ಇದ್ರ ಚಲೋ ಆಗ್ತದ, ಇಲ್ಲಾಂದ್ರ ನಿಮ್ಗ ಏನ ಮಾಡಬೇಕು ಗೊತೈತಿ ಅಂತ ಅವಾಚ್ಯ ಪದಗಳಿಂದ ಜಾತಿ ನಿಂದನೆ ಮಾಡಿ, ಜೀವಬೆದರಿಕೆ ಒಡ್ಡಿ, ಮನೆಯ ಎದುರು ಭಯ, ಭೀತಿ ಮೂಡಿಸಿದ್ದಾರೆ. ಈ ಹಿನ್ನೆಲೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಸಮಾಜದಲ್ಲಿನ ಭ್ರಷ್ಟಾಚಾರ, ಅವ್ಯವಸ್ಥೆ ವಿರುದ್ಧ, ಸಾಮಾಜಿಕ ಕಳಕಳಿಯಿಂದ ಜೀವದ ಹಂಗು ತೊರೆದು, ಆರೋಗ್ಯಕರ, ಉತ್ತಮ ಸಮಾಜಕ್ಕಾಗಿ ಶ್ರಮಿಸುವ ಪತ್ರಕರ್ತರ ಮೇಲೆ ಈ ರೀತಿ ಗೂಂಡಾ ವರ್ತನೆ ತೋರಿದ ಸಮಾಜಘಾತುಕರನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !