ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಿವಳಿಕೆ ಚುಚ್ಚುಮದ್ದು ನೀಡಿದ್ದ ವೈದ್ಯರ ಮೇಲೆಯೇ ದಾಳಿ ನಡೆಸಿ ಓಡಿಹೋಗಿದ್ದ ಚಿರತೆಯನ್ನು ಕಡೆಗೂ ಸೆರೆ ಹಿಡಿಯಲಾಗಿದೆ. ಸಿಲಿಕಾನ್ ಸಿಟಿ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅರಿವಳಿಕೆ ಚುಚ್ಚುಮದ್ದು ನೀಡಿದ್ದಾಗ ತಪ್ಪಿಸಿಕೊಂಡಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದು, ಲೆಪರ್ಡ್ಸ್ ಟಾಸ್ಕ್‌ಫೋರ್ಸ್ ವಾಹನಕ್ಕೆ ಶಿಫ್ಟ್ ಮಾಡಲಾಗುತ್ತಿದೆ.
ಅರಿವಳಿಕೆ ಚುಚ್ಚುಮದ್ದು ನೀಡಿ ಅರ್ಧ ಗಂಟೆಯಾಗಿರುವುದರಿಂದ ಚಿರತೆ ಸಂಪೂರ್ಣ ಪ್ರಜ್ಞೆತಪ್ಪಿಲ್ಲ. ಸದ್ಯ ವಾಹನದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆ ಓಡಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಭಯಭೀತರಾದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದರು. ಸತತ ಕಾರ್ಯಾಚರಣೆ ನಂತರ ಇದೀಗ ಚಿರತೆಯನ್ನು ಸೆರೆಹಿಡಿಯಲಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.