ಹೊಸದಿಗಂತ ವರದಿ ಮಡಿಕೇರಿ:
ಕರುನಾಡಿನ ಈ ಮಣ್ಣಿಗೆ, ನುಡಿಗೆ ತನ್ನದೇ ಆದ ಸೊಗಸು, ಸೌಂದರ್ಯ, ಬೆಡಗು ಇದ್ದು, ಹಾಗೆಯೇ ಪ್ರಾದೇಶಿಕ ವಿಭಿನ್ನ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು,
ಕನ್ನಡ, ಕರ್ನಾಟಕ, ಕರುನಾಡು ಎಂಬುದು ಕೇವಲ ಬರೀ ನೆಲ ಮತ್ತು ಭಾಷೆಯಲ್ಲ. ಅದೊಂದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯವಾಗಿದೆ. ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಪಸರಿಸುವಲ್ಲಿ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ನುಡಿದರು.
ಸರ್ಕಾರವು ಕಲೆ, ಸಂಸ್ಕೃತಿ ಹಾಗೂ ರಾಜ್ಯದ ಶ್ರೀಮಂತ ಪರಂಪರೆಯನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಬದ್ಧತೆಯನ್ನು ಹೊಂದಿದೆ. ಈ ಸುದಿನದಂದು ನಾವೆಲ್ಲರೂ ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಚಿವರು ಆಶಿಸಿದರು.
ಕನ್ನಡ ರಾಜ್ಯೋತ್ಸವವು ನಾಡಿನೆಲ್ಲೆಡೆ ಕನ್ನಡ ಧ್ವಜವನ್ನು ಹಾರಿಸಿ, ನಾಡಗೀತೆಯನ್ನು ಹಾಡಿ ಸಂಭ್ರಮಿಸುವ ದಿನವಾಗಿದ್ದು, ಮಿಗಿಲಾಗಿ ಸಹಬಾಳ್ವೆಯ ಸಂದೇಶ ನೀಡಿ ಸೌಹಾರ್ದತೆಯನ್ನು ಪಸರಿಸುವ ಶುಭದಿನವೂ ಆಗಿದೆ. ಸ್ವಾಭಿಮಾನದ ಜೊತೆಗೆ ಸೋದರ ಭಾಷೆಗಳನ್ನು ಗೌರವಿಸುವ ವಿಶಾಲ ಭಾವನೆ ನಮ್ಮೆಲ್ಲರದ್ದಾಗಿದ್ದು, ಈ ಮೂಲಕ ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ರೂಪಿತವಾಗಿರುವುದು ಕನ್ನಡ ನಾಡಿನ ಹಿರಿಮೆಯಾಗಿದೆ. ಕನ್ನಡ ಸಾರಸ್ವತ ಲೋಕವು 8 ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವುದು ಕನ್ನಡ ಭಾಷೆಯ ಉತ್ಕೃಷ್ಟತೆ ಹಾಗೂ ಗರಿಮೆಯನ್ನು ಬಿಂಬಿಸುತ್ತದೆ ಎಂದು ಬೋಸರಾಜು ನುಡಿದರು.
ವರ್ಷವಿಡೀ ಕಾರ್ಯಕ್ರಮ:
ಮೈಸೂರು ರಾಜ್ಯವು ‘ಕರ್ನಾಟಕ’ ಎಂದು ಮರು ನಾಮಕರಣವಾಗಿ ಇಂದಿಗೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ‘ಹೆಸರಾಯಿತು ಕರ್ನಾಟಕ, ‘ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ 2024ರ ನವೆಂಬರ್’ವರಗೆ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಹಾಗೂ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ- ಕರ್ನಾಟಕದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರ ಉದ್ದೇಶಿಸಿದೆ ಎಂದರು.
ಸಮಾರಂಭಕ್ಕೂ ಮುನ್ನ ನಗರದ ಕೋಟೆ ಆವರಣದಿಂದ ಸ್ತಬ್ಧ ಚಿತ್ರಗಳ ಹಾಗೂ ಕಲಾ ತಂಡಗಳ ಮೆರವಣಿಗೆ ನಡೆಯಿತು.
ಜಿಲ್ಲಾ ಪಂಚಾಯತ್, ಕೃಷಿ, ತೋಟಗಾರಿಕೆ, ಪಶುಪಾಲನೆ, ಅರಣ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ತಾಲೂಕು ಪಂಚಾಯತ್ ವತಿಯಿಂದ ಸ್ತಬ್ಧ ಚಿತ್ರಗಳು ಪಾಲ್ಗೊಂಡಿದ್ದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗೊಂಬೆ ಕುಣಿತ, ಡೊಳ್ಳು ಕುಣಿತ ಕಲಾ ತಂಡಗಳು ಭಾಗವಹಿಸಿದ್ದವು. ಪಥ ಸಂಚಲನದಲ್ಲಿ 18 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.