October 29, 2026
Thursday, October 29, 2026
spot_img

ಆರು ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸರು: ಇಬ್ಬರು ಟೆಕ್ಕಿಗಳ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಿಡ್ನಾಪ್‌ ಕೇಸ್‌ ದಾಖಲಾದ ಕೇವಲ ಆರು ಗಂಟೆಗಳಲ್ಲಿ ಬೆಂಗಳೂರು ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಇಬ್ಬರು ಸಾಫ್ಟ್‌ವೇರ್‌ ಉದ್ಯೋಗಿಗಳನ್ನು ಕಿಡ್ನಾಪ್‌ ಮಾಡಿದ್ದ 11 ಮಂದಿಯನ್ನು ಬಂಧಿಸಿದ್ದಾರೆ.

ಆದರೆ, ಪ್ರಕರಣವು ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಅಪಹರಣದಿಂದ ರಕ್ಷಿಸಲ್ಪಟ್ಟ ಪ್ರಮುಖ ಸಂತ್ರಸ್ತನ ವಿರುದ್ಧವೇ ಅಪಹರಣ ಪ್ರಕರಣದ ಮಹಿಳಾ ಆರೋಪಿಯೊಬ್ಬರು ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಆತನನ್ನೂ ಪೊಲೀಸರು ಬಂಧಿಸಿದ್ದಾರೆ.

ಮೊದಲು ಪ್ರತೀಕಾರದ ಉದ್ದೇಶದಿಂದ ಕಿಡ್ನಾಪ್‌ ಮಾಡಲಾಗಿದೆ. ತದನಂತರ ಕಿಡ್ನಾಪ್‌ ಮಾಡಿದ್ದೇ ಆಗಿದೆ ಸ್ವಲ್ಪ ಹಣ ಕೇಳೋಣ ಎಂದು ಆರೋಪಿಗಳು ನಿರ್ಧರಿಸಿದ್ದರು ಎನ್ನುವ ಅಂಶ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಘಟನೆ ಹಿನ್ನೆಲೆ?

ಆಂಧ್ರಪ್ರದೇಶದ ನಿವಾಸಿ ರಮಣ ಎನ್ನುವವರು ಮಾರತಹಳ್ಳಿ ಪೊಲೀಸ್‌ ಠಾಣೆಗೆ ಕಿಡ್ನಾಪ್‌ ದೂರನ್ನು ನೀಡಿದ್ದರು. ಮಾರತಹಳ್ಳಿಯಲ್ಲಿ ವಾಸವಾಗಿದ್ದ ಮಗ ಬಿ. ಮಹೇಂದ್ರ ಹಾಗೂ ಆತನ ರೂಮ್‌ಮೃಟ್‌ ಯೆರಿಬೋಯಿನ ತರುಣ್‌ ಎನ್ನುವವರನ್ನು ನಿನ್ನೆ 2.50ರಿಂದ ಬೆಳಿಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಅಪಹರಿಸಲಾಗಿದೆ ಎಂದಿದ್ದರು.

ದೂರು ದಾಖಲಾಗುತ್ತಿದ್ದಂತೆಯೇ ಮಾರತಹಳ್ಳಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಪುನೀತ್‌ ಬಿ.ಎನ್‌. ನೇತೃತ್ವದಲ್ಲಿ ಹುಡುಕಾಟಕ್ಕೆ ವಿಶೇಷ ತಂಡ ರಚಿಸಲಾಯಿತು. ತಂಡವು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುವುದರ ಜತೆಗೆ ವಿವಿಧ ಸ್ಥಳಗಳಲ್ಲಿ ತಾಂತ್ರಿಕ ವಿಧಾನಗಳ ಮೂಲಕ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತು. ಕೇವಲ ಆರು ಗಂಟೆಯಲ್ಲಿ ಪೊಲೀಸರು ನಾಪತ್ತೆಯಾದವರನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಅಪಹರಣ ಪ್ರಕರಣದಲ್ಲಿ ಬಂಧಿತಳಾಗಿರುವ 21 ವರ್ಷದ ಮಹಿಳೆ ಮೇಲೆ ಮಹೇಂದ್ರ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಬೆಳಕಿಗೆ ಬಂದಿದೆ. ಅಕ್ಟೋಬರ್‌ 24ರ ಶನಿವಾರ ನಸುಕಿನ ಜಾವ 1.30ರಿಂದ 4 ಗಂಟೆಯ ನಡುವಿನ ಅವಧಿಯಲ್ಲಿ ಮಹೇಂದ್ರ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಘಟನೆ ನಡೆದ ತಕ್ಷಣ ಪೊಲೀಸರಿಗೆ ದೂರು ನೀಡುವ ಬದಲು, ಆರೋಪಿಗಳು ಒಟ್ಟಾಗಿ ಸೇರಿ ಮಹೇಂದ್ರನನ್ನು ಅಪಹರಿಸಲು ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

Must Read