February 16, 2026
Monday, February 16, 2026
spot_img

SHOCKING | ಬೆಚ್ಚಿಬಿತ್ತು ಬೆಂಗಳೂರು, ಲಾಂಗ್‌ ತೋರಿಸಿ 31 ಲಕ್ಷ ರೂ. ಲೂಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖದೀಮರ ಅಟ್ಟಹಾಸ ಮಿತಿಮೀರಿದ್ದು, ಬನ್ನೇರುಘಟ್ಟ ಸಮೀಪ ಹಾಡಹಗಲೇ ಸಿನಿಮೀಯ ರೀತಿಯಲ್ಲಿ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್, ಬರೋಬ್ಬರಿ 31 ಲಕ್ಷದ 38 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ಕೈಲಾಸ್ ಎಂಬ ಯುವಕ ರಾಕೇಶ್ ಎಂಬುವವರ ಬಳಿ ಕ್ಯಾಷ್ ಕಲೆಕ್ಟಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಈತನ ಕೆಲಸ ಉಡಾನ್ ಕಂಪನಿಯ ವಿವಿಧ ಬ್ರಾಂಚ್‌ಗಳಿಗೆ ಭೇಟಿ ನೀಡಿ ಹಣವನ್ನು ಸಂಗ್ರಹಿಸುವುದಾಗಿತ್ತು. ಎಂದಿನಂತೆ ನಿನ್ನೆ ಸಂಜೆ ಕೂಡ ಕೈಲಾಸ್ ವಿವಿಧ ಬ್ರಾಂಚ್‌ಗಳಿಂದ ಒಟ್ಟು 31,38,625 ರೂಪಾಯಿ ಹಣ ಕಲೆಕ್ಟ್ ಮಾಡಿದ್ದ. ಸಂಗ್ರಹಿಸಿದ ಇಷ್ಟೂ ಬೃಹತ್ ಮೊತ್ತದ ಹಣವನ್ನು ಕೈಲಾಸ್ ತನ್ನ ಜುಪಿಟರ್ ಸ್ಕೂಟರ್‌ನ ಡಿಕ್ಕಿಯಲ್ಲಿಟ್ಟುಕೊಂಡು ಬನ್ನೇರುಘಟ್ಟ ಸಮೀಪದ ಸಕಲವಾರ ರಸ್ತೆಯಲ್ಲಿ ಸಂಚರಿಸುತ್ತಿದ್ದ.

ನಿನ್ನೆ ಸಂಜೆ ಸುಮಾರು 4:20ರ ಸುಮಾರಿಗೆ ಈತ ಸಕಲವಾರ ರಸ್ತೆಯಿಂದ ಬನ್ನೇರುಘಟ್ಟದ ಕಡೆಗೆ ಬರುತ್ತಿದ್ದಾಗ ದರೋಡೆ ನಡೆದಿದೆ. ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿಕೊಂಡು ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಕೈಲಾಸ್‌ನನ್ನು ಅಡ್ಡಗಟ್ಟಿದ್ದಾರೆ. ಕೈಯಲ್ಲಿದ್ದ ಲಾಂಗ್ ತೋರಿಸಿ ಯುವಕನ ಮೇಲೆ ಹಲ್ಲೆಗೆ ಮುಂದಾದ ದರೋಡೆಕೋರರು ಆತನ ಬೆದರಿಸಿ ಬೈಕ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾರೆ.

ದರೋಡೆ ಮಾಡಿದ ಗ್ಯಾಂಗ್ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಕೈಲಾಸ್‌ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಬಳಿಕ ನಿರ್ಜನ ಪ್ರದೇಶವೊಂದರಲ್ಲಿ ಬೈಕ್ ನಿಲ್ಲಿಸಿ, ಅದರ ಡಿಕ್ಕಿಯಲ್ಲಿದ್ದ 31 ಲಕ್ಷಕ್ಕೂ ಅಧಿಕ ಹಣವನ್ನು ತೆಗೆದುಕೊಂಡು, ಖಾಲಿ ಬೈಕನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !