November 13, 2026
Friday, November 13, 2026
spot_img

ಜಮೀನು ಲಾವಣಿಯ ಕಲಹ: ತಂದೆ- ಮಗನ ಜೋಡಿ ಕೊ*ಲೆಯಲ್ಲಿ ಅಂತ್ಯ

ಹೊಸದಿಗಂತ ವರದಿ ವಿಜಯಪುರ:

ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ಜಮೀನು ಲಾವಣಿಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆದ ಕಲಹ ತಂದೆ- ಮಗನ ಜೋಡಿ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ನಡೆದಿದೆ. ಇಲ್ಲಿನ ಹನುಮಂತ ಯಲ್ಲಪ್ಪ ಸಾಲವಾಡಗಿ (60) ಹಾಗೂ ಈತನ ಮಗ ಮಂಜುನಾಥ್ ಹನುಮಂತ ಸಾಲವಾಡಗಿ (30) ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ತಡಲಗಿ ಗ್ರಾಮದ ಹನುಮವ್ವ ಮೇಟಿ ಎಂಬುವವರ ಜಮೀನು ಲಾವಣಿಯನ್ನು ಸಾಲವಾಡಗಿ ಕುಟುಂಬದವರು ಪಡೆದಿದ್ದರು. ಈ ಜಮೀನಿನಲ್ಲಿ ನಮ್ಮ ಪಾಲಿದೆ ಎಂದು ಸಾಲವಾಡಗಿ ಕುಟುಂಬದವರ ಜೊತೆ ಹನುಮವ್ವ ಸಂಬಂಧಿಕರು ಜಗಳ ತೆಗೆದಿದ್ದರು. 10 ಎಕರೆ ಜಮೀನಿನಲ್ಲಿ ಲಾವಣಿ ಪಡೆದು ಸಾಲವಾಡಗಿ ಕುಟುಂಬದವರು ಕಬ್ಬು ಬೆಳೆದಿದ್ದರು. ಕಬ್ಬು ಕಟಾವು ಮಾಡಬೇಡಿ ಎಂದು ಹನುಮವ್ವ ಸಂಬಂಧಿಕರು ತಕರಾರು ತಗೆದಿದ್ದರು ಎಂದು ಹೇಳಲಾಗಿದೆ.

ಜಮೀನು ಲಾವಣಿ ಪಡೆದಿದ್ದ ಸಾಲವಾಡಗಿ ಕುಟುಂಬ ಇಂದು ಕಬ್ಬು ಕಟಾವು ಮಾಡೋಕೆ ಹೋಗಿದ್ದರು, ಈ ವೇಳೆ ಹನುಮವ್ವ ಸಂಬಂಧಿಕರ ಮಧ್ಯೆ ವಾಗ್ವಾದ ನಡೆದಿದ್ದು, ಮಾತಿಗೆ ಮಾತು ಬೆಳೆದು ಎರಡು ಗುಂಪು ಕೈ ಕೈ ಮಿಲಾಯಿಸಿದ್ದು, ಈ ವೇಳೆ ಜಮೀನು ಲಾವಣಿ ಪಡೆದವರ ಮೇಲೆ ಕಲ್ಲು ಕಟ್ಟಿಗೆ ಬೊಂಬುಗಳಿಂದ ಹಲ್ಲೆ ನಡೆದಿದ್ದು, ತೀವ್ರ ಅಸ್ವಸ್ಥಗೊಂಡ ಹನುಮಂತ ಹಾಗೂ ಮಂಜುನಾಥ್ ಸ್ಥಳದಲ್ಲಿಯೇ ಅಸುನೀಗಿದ್ದಾರೆ.

ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read