ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ರೋಚಕತೆಯ ನಡುವೆ ಇದೀಗ ಎಲ್ಲರ ಕಣ್ಣು 26ನೇ ಪಂದ್ಯದತ್ತ ನೆಟ್ಟಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿವೆ. ವಿಶೇಷವೆಂದರೆ, ಮಧ್ಯಾಹ್ನ 3:30ಕ್ಕೆ ಆರಂಭವಾಗುವ ಈ ಪಂದ್ಯವನ್ನು ‘ಕನ್ನಡಿಗರು vs ಕರ್ನಾಟಕದ ತಂಡ’ದ ನಡುವಿನ ಹೋರಾಟವೆಂದೇ ವಿಶ್ಲೇಷಿಸಲಾಗುತ್ತಿದೆ.
ಆರ್‌ಸಿಬಿ ಕರ್ನಾಟಕದ ಹೆಮ್ಮೆಯ ತಂಡವಾದರೂ, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಮಿಂಚುತ್ತಿದ್ದಾರೆ. ಹೀಗಾಗಿ ಮೈದಾನದಲ್ಲಿ ಸ್ಥಳೀಯ ಪ್ರತಿಭೆಗಳು ಮತ್ತು ನೆಚ್ಚಿನ ತಂಡದ ನಡುವಿನ ಈ ಪೈಪೋಟಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
2011ರಿಂದಲೂ ಆರ್‌ಸಿಬಿ ಪ್ರತಿ ಆವೃತ್ತಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಒಂದು ಪಂದ್ಯವನ್ನು ಹಸಿರು ಜೆರ್ಸಿ ತೊಟ್ಟು ಆಡುತ್ತಿದೆ. ಈ ಬಾರಿಯೂ ಡೆಲ್ಲಿ ವಿರುದ್ಧದ ಪಂದ್ಯಕ್ಕಾಗಿ ಮರುಬಳಕೆಯ ವಸ್ತುಗಳಿಂದ ಸಿದ್ಧಪಡಿಸಲಾದ ವಿಶೇಷ ಹಸಿರು ಮತ್ತು ನೀಲಿ ಬಣ್ಣ ಮಿಶ್ರಿತ ಆಕರ್ಷಕ ಜೆರ್ಸಿಯನ್ನು ಧರಿಸಲಿದೆ.
ಹಸಿರು ಜೆರ್ಸಿಯಲ್ಲಿ ಆರ್‌ಸಿಬಿ ರಿಪೋರ್ಟ್ ಕಾರ್ಡ್:
ಒಟ್ಟು ಪಂದ್ಯಗಳು: 15
ಜಯ: 05
ಸೋಲು: 09
ಫಲಿತಾಂಶವಿಲ್ಲ: 01
ಕಳೆದ ಆವೃತ್ತಿಯ ‘ಗ್ರೀನ್ ಗೇಮ್’ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ಸಾಧಿಸಿತ್ತು. ಅಂದು ವಿರಾಟ್ ಕೊಹ್ಲಿ (62) ಹಾಗೂ ಫಿಲ್ ಸಾಲ್ಟ್ (65) ಅವರ ಅಮೋಘ ಅರ್ಧಶತಕಗಳ ನೆರವಿನಿಂದ ತಂಡ ಗೆಲುವಿನ ನಗೆ ಬೀರಿತ್ತು. ಅದೇ ಲಯವನ್ನು ಈ ಬಾರಿಯೂ ಮುಂದುವರಿಸಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸದಲ್ಲಿ ಆರ್‌ಸಿಬಿ ಪಡೆ ಇದೆ.



