ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾ ಸದ್ಯ ಭಾರೀ ಬಜೆಟ್ ಮತ್ತು ಅದ್ಧೂರಿ ದೃಶ್ಯ ಪರಿಣಾಮಗಳ (VFX) ಕಾರಣಕ್ಕೆ ಸುದ್ದಿಯಲ್ಲಿದೆ. ಆದರೆ ಚಿತ್ರದ ಚರ್ಚೆ ಕೇವಲ ತಾಂತ್ರಿಕ ವೈಭವ ಮತ್ತು ನಿರ್ಮಾಣ ವೆಚ್ಚಕ್ಕೆ ಸೀಮಿತವಾಗಬಾರದು, ರಾಮಾಯಣದ ಕಥೆ, ಪಾತ್ರಗಳು ಹಾಗೂ ಅದರಲ್ಲಿರುವ ಮೌಲ್ಯಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಮುಂಬರುವ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣದ ಕುರಿತು ನಡೆಯುತ್ತಿರುವ ಚರ್ಚೆಯ ದಿಕ್ಕಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 4,000 ಕೋಟಿ ಬಜೆಟ್ ಮತ್ತು VFX ಕುರಿತ ಮಾತುಗಳಿಗಿಂತ ರಾಮ, ರಾವಣ, ಸೀತೆ ಹಾಗೂ ಪವಿತ್ರ ಗ್ರಂಥಗಳಲ್ಲಿರುವ ಸಂದೇಶಗಳ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದರು.
ರಾಮನ ಗುಣಗಳೇ ನಿಜವಾದ ಸಂದೇಶ
ಭಗವಾನ್ ರಾಮನ ವ್ಯಕ್ತಿತ್ವವನ್ನು ವಿವರಿಸಿದ ಸಲ್ಮಾನ್ ಖಾನ್, ಅವರು ಆದರ್ಶ ಪತಿ, ತಂದೆ, ಮಗ, ಸಹೋದರ ಹಾಗೂ ಶ್ರೇಷ್ಠ ಯೋಧರಾಗಿದ್ದರು ಎಂದು ಹೇಳಿದರು. ತಮ್ಮ ‘ಮಾತೃಭೂಮಿ’ ಚಿತ್ರದ ಪಾತ್ರದಲ್ಲಿಯೂ ಇಂತಹ ಗುಣಗಳಿರುವುದಾಗಿ ಅವರು ಹೋಲಿಕೆ ಮಾಡಿದರು.
ಇದನ್ನೂ ಓದಿ:
75 ವರ್ಷ ಮೇಲ್ಪಟ್ಟವರಿಗೆ 11 ರೂ. ಗೆ ಟಿಕೆಟ್
ಇದೇ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷ ಘೋಷಣೆ ಮಾಡಿದ ಸಲ್ಮಾನ್ ಖಾನ್, 75 ವರ್ಷಕ್ಕಿಂತ ಮೇಲ್ಪಟ್ಟ ಪ್ರೇಕ್ಷಕರಿಗೆ ‘ಮಾತೃಭೂಮಿ’ ಸಿನಿಮಾ ವೀಕ್ಷಿಸಲು ಕೇವಲ 11 ರೂ. ಟಿಕೆಟ್ ದರ ನಿಗದಿಪಡಿಸಿರುವುದಾಗಿ ತಿಳಿಸಿದರು.
ಇನ್ನು ತಾವು ನಿತೇಶ್ ತಿವಾರಿ ಅವರ ಹೊಸ ‘ರಾಮಾಯಣ’ ಸಿನಿಮಾ ನೋಡಿದ್ದೀರಾ ಎಂಬ ಪ್ರಶ್ನೆಗೆ ಸಲ್ಮಾನ್ ನಗುತ್ತಲೇ, ತಾವು ನೋಡಿದ್ದು ರಾಮಾನಂದ ಸಾಗರ್ ಅವರ ‘ರಾಮಾಯಣ’ ಎಂದು ಉತ್ತರಿಸಿದರು.



