ದೇಶದ ಎಲ್ಲಾ ಜನರಿಗೆ ಭಗವದ್ಗೀತೆ ತಲುಪಿಸಿದ್ದು ಕಾಂಗ್ರೆಸ್‌: ಡಿ.ಕೆ.ಶಿವಕುಮಾರ್

ಹೊಸದಿಗಂತ ವರದಿ, ಮೈಸೂರು
ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾವೂ ಸಹ ಹಿಂದೂಗಳೇ ಆಗಿದ್ದೇವೆ. ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ದೂರದರ್ಶನದಲ್ಲಿ ರಾಮಾಯಣ, ಮಹಾಭಾರತಗಳನ್ನು ಪ್ರಸಾರ ಮಾಡಿ ಜನರಿಗೆ ತಲುಪಿಸಿದ್ದನ್ನು ಯಾರೂ ಮರೆಯಬಾರದು ಎಂದರು.
ಭಗವದ್ಗೀತೆ ಪ್ರಚಾರಕ್ಕೆ ಫೌಂಡೇಶನ್ ಹಾಕಿದ್ದೇ ರಾಜೀವ್‌ಗಾಂಧಿ. ದೂರದರ್ಶನದ ಮೂಲಕ ಮನೆ ಮನೆಗೆ ಮಹಾಭಾರತ, ರಾಮಾಯಣ ತೋರಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಗವದ್ಗೀತೆಗೆ ಗೌರವ ಸಿಗುವಂತೆ ಮಾಡಿದ್ದರು. ಆದರೆ, ಇಂದು ಬಿಜೆಪಿ ನಾಯಕರು ಅದೇ ವಿಚಾರವನ್ನಿಟ್ಟುಕೊಂಡು ಸಮಾಜವನ್ನು ಇಬ್ಬಾಗ ಮಾಡಲು ಮುಂದಾಗಿದ್ದಾರೆ. ಜನರೇನೂ ದಡ್ಡರಲ್ಲ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ಅವರ ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನಾವು ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋಗುತ್ತೇವೆ ಎಂದು ಹೇಳಿದರು.

ಮುಖಂಡರ ಜತೆ ಸಮಾಲೋಚನೆ
ದಕ್ಷಿಣ ಪದವೀಧರರ ಕ್ಷೇತ್ರದಲ್ಲ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ವಿಚಾರವಾಗಿ ಮುಖಂಡರ ಜೊತೆಗೆ ಸಮಾಲೋಚನೆ ನಡೆಸಿದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 25ಸಾವಿರ ಸದಸ್ಯತ್ವ ನೋಂದಣಿ ಮಾಡಿಸಬೇಕು. ಅದೇ ರೀತಿ ಪದವೀಧರರ ಚುನಾವಣೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ದಕ್ಷಿಣ ಪದವೀಧರರ ಕ್ಷೇತ್ರದ ಅಭ್ಯರ್ಥಿ ಮಧು ಜಿ.ಮಾದೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಧರ್ಮಸೇನ, ಮುಖಂಡರಾದ ಶ್ರೀನಾಥ್‌ಬಾಬು,ಕೋಟೆಹುಂಡಿ ಮಹದೇವು,ರಘು ಇನ್ನಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!