ಕೊಲಗಾಂವ್ ಪ್ರದೇಶದಲ್ಲಿ ಎನ್‌ಕೌಂಟರ್ : ಇಬ್ಬರು ಎನ್‌ಎಸ್‌ಸಿಎನ್-ಐಎಂ ಬಂಡುಕೋರರು ಸಾವು; ಓರ್ವನ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್
ತಿರಾಪ್:
ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ನಾಗಾಲ್ಯಾಂಡ್-ಇಸಾಕ್ ಮುವಾಹ್ (ಎನ್‌ಎಸ್‌ಸಿಎನ್-ಐಎಂ)ನ ಇಬ್ಬರು ಭಯೋತ್ಪಾದಕರು ಹತರಾಗಿದ್ದು, ಓರ್ವ ಉಗ್ರ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ತಿರಾಪ್ ಜಿಲ್ಲೆಯ ಖೋನ್ಸಾ ಬಳಿಯ ಓಲ್ಡ್ ಕೊಲಗಾಂವ್ ಪ್ರದೇಶದಲ್ಲಿ ಭಾನುವಾರ ಎನ್‌ಕೌಂಟರ್ ನಡೆದಿದೆ. ಭದ್ರತಾ ಸಿಬ್ಬಂದಿ ಈ ಪ್ರದೇಶದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಒಬ್ಬ ಭಯೋತ್ಪಾದಕನನ್ನು ಸಹ ಬಂಧಿಸಿದ್ದಾರೆ.
ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ಶನಿವಾರ ಜಂಟಿಯಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಗಾಯಗೊಂಡ ದಂಗೆಕೋರನನ್ನು ಅಸ್ಸಾಂನ ದಿಬ್ರುಗಢ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಬ್ಬಂದಿ ಎನ್‌ಕೌಂಟರ್ ನಡೆದ ಸ್ಥಳದಿಂದ ಒಂದು ಎಕೆ 56 ರೈಫಲ್, ಯುಎಸ್‌ನಲ್ಲಿ ತಯಾರಿಸಿದ 5.56 ಎಂಎಂ ಎಂ4 ಎ 1 ಕಾರ್ಬೈನ್, ಒಂದು 32 ಎಂಎಂ ಪಿಸ್ತೂಲ್, ಮದ್ದುಗುಂಡುಗಳ ಬೃಹತ್ ಸಂಗ್ರಹ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅರುಣಾಚಲ ಪ್ರದೇಶದ ಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಚುಕು ಅಪಾ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!