2700 ಕೋಟಿ ರೂ. ಬಜೆಟ್, 123 ಎಕರೆ ಭೂಮಿ: ಜಿ20 ನಾಯಕರು ಸೇರುವ ಸ್ಥಳದ ಸಂಪೂರ್ಣ ವಿವರ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ G-20 ಶೃಂಗಸಭೆಗಾಗಿ ವಿಶ್ವದ ರಾಷ್ಟ್ರಗಳ ಮುಖ್ಯಸ್ಥರು ರಾಜಧಾನಿ ದೆಹಲಿಗೆ ಬರಲಿದ್ದಾರೆ. ಪ್ರಗತಿ ಮೈದಾನದ ʻಭಾರತ ಮಂಟಪʼದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಅಮೆರಿಕ, ಚೀನಾ ಮತ್ತು ಈಜಿಪ್ಟ್ ಸೇರಿದಂತೆ ಜಿ-20 ರಾಷ್ಟ್ರಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ಹಲವು ದೇಶಗಳ ಮುಖ್ಯಸ್ಥರು, ಅಧಿಕಾರಿಗಳು, ಪತ್ರಕರ್ತರು ಮತ್ತಿತರ ಗಣ್ಯರೂ ಇಲ್ಲಿಗೆ ಆಗಮಿಸುತ್ತಾರೆ. ಹಾಗಾಗಿ ಪ್ರಗತಿ ಮೈದಾನದಲ್ಲಿರುವ ಈ ಭಾರತ ಮಂಟಪದ ವಿಶೇಷತೆ ಏನು? ಇದು ಭಾರತದ ಖ್ಯಾತಿಯನ್ನು ಹೇಗೆ ಹೆಚ್ಚಿಸಲಿದೆ? ಅದರ ಪ್ರತಿಯೊಂದು ಅಂಶವನ್ನು ತಿಳಿಯೋಣ..

ದೆಹಲಿಯ ಪ್ರಗತಿ ಮೈದಾನದ ಸಂಕೀರ್ಣದಲ್ಲಿ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಕನ್ವೆನ್ಷನ್ ಸೆಂಟರ್ (ಐಇಸಿಸಿ) ಅನ್ನು ಸ್ಥಾಪಿಸಲಾಗಿದೆ. ಇಲ್ಲಿನ ಸಮಾವೇಶ ಕೇಂದ್ರಕ್ಕೆ ʻಭಾರತ ಮಂಟಪʼ ಎಂದು ಹೆಸರಿಡಲಾಗಿದ್ದು, ಇದನ್ನು ಜುಲೈ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ಈ ಸಮಾವೇಶ ಕೇಂದ್ರ ಒಟ್ಟು 123 ಎಕರೆ ಪ್ರದೇಶದಲ್ಲಿ, 2700 ಕೋಟಿ ರೂ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಇದು ಭಾರತವನ್ನು ವ್ಯಾಪಾರದ ತಾಣವಾಗಿ ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಬಸವಣ್ಣನವರ ‘ಅನುಭವ ಮಂಟಪ’ ಪರಿಕಲ್ಪನೆಯಿಂದ ಪ್ರೇರಿತರಾಗಿ ಭಾರತ ಸರ್ಕಾರ ‘ಭಾರತ ಮಂಟಪ’ ಎಂದು ನಾಮಕರಣ ಮಾಡಿತು. ದೇಶದ ವಿವಿಧ ಭಾಗಗಳ ನೋಟಗಳನ್ನು ಪ್ರಪಂಚದ ಮುಂದೆ ಪ್ರಸ್ತುತಪಡಿಸುವುದು ಇದರ ಉದ್ದೇಶವಾಗಿದೆ.

  • ಪ್ರಗತಿ ಮೈದಾನದ ಮಧ್ಯಭಾಗದಲ್ಲಿರುವ ಭಾರತ ಮಂಟಪವು ಅತ್ಯಾಧುನಿಕ ಅಭಿವೃದ್ಧಿಯಾಗಿದೆ.
  • ಇದು ಮೀಟಿಂಗ್ ರೂಮ್, ಲಾಂಜ್, ಆಡಿಟೋರಿಯಂ, ಆಂಫಿಥಿಯೇಟರ್, ವ್ಯಾಪಾರ ಕೇಂದ್ರ ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ.
  • ಭಾರತ ಮಂಟಪದ ಮುಖ್ಯ ಸಭಾಂಗಣವನ್ನು ತುಂಬಾ ದೊಡ್ಡದಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 7 ಸಾವಿರ ಜನರು ಕುಳಿತುಕೊಳ್ಳಬಹುದು. ಇದು ಸಿಡ್ನಿ ಒಪೇರಾ ಹೌಸ್‌ಗಿಂತ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ.
  • ಅಷ್ಟೇ ಅಲ್ಲ, ಆಂಫಿಥಿಯೇಟರ್ 3000 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನೂ ಹೊಂದಿದೆ.
  • ಭಾರತ ಮಂಟಪ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿಯೂ ದೇಶದ ಸಂಸ್ಕೃತಿ ಎದ್ದು ಕಾಣುತ್ತದೆ. ಇದರ ಆಕಾರವು ಶಂಕುವಿನಾಕಾರದಂತಿದ್ದು, ಸೂರ್ಯಶಕ್ತಿ, ಶೂನ್ಯದಿಂದ ISRO, ಪಂಚ ಮಹಾಭೂತಂ ಮುಂತಾದ ಥೀಮ್‌ಗಳನ್ನು ಗೋಡೆಗಳ ಮೇಲೆ ಹೈಲೈಟ್ ಮಾಡಲಾಗಿದೆ.
  • ಭಾರತ ಮಂಟಪವನ್ನು ಸಂಪೂರ್ಣವಾಗಿ ಆಧುನೀಕರಿಸಲಾಗಿದೆ. ಇದು 5-ಜಿ ವೈಫೈ ಕ್ಯಾಂಪಸ್ ಆಗಿದೆ. ಸಮ್ಮೇಳನ ಸಭಾಂಗಣದಲ್ಲಿ 16 ಭಾಷಾಂತರ ಸೌಲಭ್ಯ, ವಿಡಿಯೋ ವಾಲ್, ಕಟ್ಟಡ ನಿರ್ವಹಣಾ ವ್ಯವಸ್ಥೆ, ಬೆಳಕಿನ ನಿರ್ವಹಣಾ ವ್ಯವಸ್ಥೆ, ಡೇಟಾ ಸಂವಹನ ಕೇಂದ್ರ ಇತ್ಯಾದಿಗಳನ್ನು ಒಳಗೊಂಡಿದೆ.
  • ಭಾರತ ಮಂಟಪ ಇರುವ ಐಇಸಿಸಿ ಸಂಕೀರ್ಣದಲ್ಲಿ ಪ್ರದರ್ಶನ ಸಭಾಂಗಣ, ವ್ಯಾಪಾರ ಮೇಳ ಕೇಂದ್ರಗಳು ಮತ್ತು ವ್ಯಾಪಾರ ಕಾರ್ಯಕ್ರಮ ಕೇಂದ್ರವನ್ನು ಸಹ ನಿರ್ಮಿಸಲಾಗಿದೆ.
  • ಸಂಪೂರ್ಣ ಸಂಕೀರ್ಣವು ಸಂಗೀತ ಕಾರಂಜಿಗಳು, ದೊಡ್ಡ ಶಿಲ್ಪಗಳು, ಕೊಳಗಳು ಮತ್ತು ಇತರ ಆಕರ್ಷಕ ವಸ್ತುಗಳನ್ನು ಹೊಂದಿದೆ.
  • ಐಇಸಿಸಿ ಸಂಕೀರ್ಣವು ಸುಮಾರು 5500 ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದೆ.
  •  ಪ್ರಯಾಣಿಕರಿಗೆ ಅನುಕೂಲವಾಗಲು ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣವು ತುಂಬಾ ಹತ್ತಿರದಲ್ಲಿದೆ.
  • ಜಿ-20 ಹಿನ್ನೆಲೆಯಲ್ಲಿ ಭಾರತ ಮಂಟಪದಲ್ಲಿ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದ್ದು, ವಿಶೇಷ ಐಸಿಯು, ವೈದ್ಯಕೀಯ ಕೇಂದ್ರವನ್ನು ಸಹ ನಿರ್ಮಿಸಲಾಗಿದೆ. ಕಾರ್ಯಕ್ರಮಕ್ಕಾಗಿ ವಿಶೇಷ ಆಕರ್ಷಣೆಯಾಗಿ ತಮಿಳುನಾಡಿನಲ್ಲಿ ತಯಾರಿಸಲಾದ ನಟರಾಜನ ವಿಗ್ರಹವನ್ನು ಭಾರತ ಮಂಟಪದ ಹೊರಗೆ ಪ್ರತಿಷ್ಠಾಪಿಸಲಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!