ಬಾಲಿವುಡ್​ಗೆ ತುಸು ಸಮಾಧಾನ ನೀಡಿದ ‘ಭೂಲ್ ಭುಲಯ್ಯ 2’: ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್ ಅಂಗಳದಲ್ಲಿ ಸಾಲು ಸಾಲು ಪರ ಭಾಷೆ ಸಿನಿಮಾಗಳು ಯಶಸ್ಸು ಕಾಣುವ ಮೂಲಕ ಅಲ್ಲಿನ ಸಿನಿಮಾಗಳಿಗೆ ಸಖತ್ ಠಕ್ಕರ್ ನೀಡಿತ್ತು. ಇಂದರಿಂದ ದಕ್ಷಿಣ ಭಾರತದ ಸಿನಿಮಾ ಎದುರು ಅನೇಕ ಬಾಲಿವುಡ್ ಸಿನಿಮಾ ಸೋಲಕೊಂಡಿತ್ತು.
ಈ ನಡುವೆ ರಿಲೀಸ್ ಆಗಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಮೊದಲ ದಿನ ಕಡಿಮೆ ಗಳಿಸಿದ್ದರೂ ನಂತರ ಅದ್ಭುತವಾಗಿ ಕಲೆಕ್ಷನ್ ಮಾಡಿತ್ತು. ಆದರೆ ಸ್ಟಾರ್​ಗಳು ನಟಿಸಿದ್ದ ಯಾವ ಚಿತ್ರಗಳೂ ಪ್ರೇಕ್ಷಕರ ಮನಗೆದ್ದಿರಲಿಲ್ಲ. ಸಲ್ಮಾನ್ ಖಾನ್, ರಣವೀರ್ ಸಿಂಗ್, ಶಾಹಿದ್ ಕಪೂರ್, ಅಕ್ಷಯ್ ಕುಮಾರ್ ಸೇರಿದಂತೆ ಸ್ಟಾರ್ ನಟರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದೇ ಬದಿಗೆ ಸರಿದಿದ್ದವು. ಇದಕ್ಕೆ ಕಾರಣ ದಕ್ಷಿಣ ಭಾರತದ ಚಿತ್ರಗಳು ಹಿಂದಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿತ್ತು.
ಇದೀಗ ಹಿಂದಿ ಚಿತ್ರರಂಗಕ್ಕೆ ಭರವಸೆಯಂತೆ ‘ಭೂಲ್ ಭುಲಯ್ಯ 2’ ತೆರೆಕಂಡಿದೆ. ಹಾರರ್ ಕಾಮಿಡಿ ಮಾದರಿಯ ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾನಿ ಮೊದಲಾದವರು ನಟಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಪರಿಣಾಮವಾಗಿ ಬಾಕ್ಸಾಫೀಸ್ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಈ ಮೂಲಕ ಭರವಸೆಯನ್ನು ಹುಟ್ಟಿಸಿದೆ.
ಶುಕ್ರವಾರ ತೆರೆಕಂಡಿದ್ದ ‘ಭೂಲ್ ಭುಲಯ್ಯ 2’ ಮೊದಲ ದಿನವೇ ನಿರೀಕ್ಷೆಗೂ ಮೀರಿ 14 ಕೋಟಿ ರೂ ಗಳಿಸಿತ್ತು. ಎರಡನೇ ದಿನ 18 ಕೋಟಿ ರೂ ಬಾಚಿಕೊಂಡಿದ್ದು, ಮೊದಲ ದಿನಕ್ಕಿಂತ ಕಲೆಕ್ಷನ್ ಮತ್ತಷ್ಟು ಏರಿದೆ. ಇದರಿಂದ ಒಟ್ಟಾರೆ 32.45 ಕೋಟಿ ರೂಗಳನ್ನು ಚಿತ್ರ ಗಳಿಸಿದಂತಾಗಿದೆ. ಚಿತ್ರಕ್ಕೆ ಪ್ರತಿಕ್ರಿಯೆ ಉತ್ತಮವಾಗಿರುವುದರಿಂದ ಭಾನುವಾರ ಕೂಡ ಗಳಿಕೆ ಏರುವ ಸಾಧ್ಯತೆ ಇದೆ.
​ ‘ಭೂಲ್​ ಭುಲಯ್ಯ 2’ಗೆ2022ರ ಐದು ತಿಂಗಳ ಅವಧಿಯಲ್ಲಿ ಯಾವ ಹಿಂದಿ ಚಿತ್ರವೂ ಪಡೆಯದ ದಾಖಲೆಯ ಓಪನಿಂಗ್​ ಸಿಕ್ಕಿದೆ. ಅನೀಸ್ ಬಜ್ಮಿ ನಿರ್ದೇಶನದ ಈ ಚಿತ್ರ 2007ರಲ್ಲಿ ತೆರೆಕಂಡಿದ್ದ ‘ಭೂಲ್ ಭುಲಯ್ಯ’ ಚಿತ್ರದ ಸೀಕ್ವೆಲ್ ಆಗಿದೆ. ಪ್ರಿಯದರ್ಶನ್ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದರು.
ಕಂಗನಾ ನಟನೆಯ ‘ಧಾಕಡ್’ ಕೂಡ ಶುಕ್ರವಾರ ತೆರೆಕಂಡಿತ್ತು. ಆದರೆ ಪ್ರೇಕ್ಷಕರು ಅದರ ಕೈಹಿಡಿದಿಲ್ಲ. ಎರಡು ದಿನಗಳಲ್ಲಿ ಚಿತ್ರದ ಗಳಿಕೆ ಒಂದು ಕೋಟಿ ರೂಗಳ ಆಸುಪಾಸಿನಲ್ಲಿದೆ. ಸುಮಾರು 100 ಕೋಟಿ ರೂ ಬಜೆಟ್​ನ ಚಿತ್ರ ದಾರುಣವಾಗಿ ಸೋಲು ಕಂಡಿದೆ.
ಹಿಂದಿಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ ಒಟ್ಟಾರೆ 340 ಕೋಟಿ ರೂ ಬಾಚಿಕೊಂಡಿತ್ತು. ಅದರ ಹೊರತಾಗಿ ಮತ್ಯಾವ ಹಿಂದಿ ಚಿತ್ರಗಳು ಅದರಲ್ಲೂ ಕಮರ್ಷಿಯಲ್ ಚಿತ್ರಗಳು ಇತ್ತೀಚೆಗೆ ಯಶಸ್ವಿಯಾಗಿಲ್ಲ. ‘ಆರ್​ಆರ್​ಆರ್’, ‘ಕೆಜಿಎಫ್ ಚಾಪ್ಟರ್ 2’, ‘ಪುಷ್ಪ: ದಿ ರೈಸ್’ ಮೊದಲಾದ ಚಿತ್ರಗಳು ಹಿಂದಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿ ಬಾಕ್ಸಾಫೀಸ್ ಕೊಳ್ಳೆಹೊಡೆದಿದ್ದವು. ಇದರಿಂದ ನಿರಾಶೆಯಲ್ಲಿದ್ದ ಬಾಲಿವುಡ್​ಗೆ ‘ಭೂಲ್ ಭುಲಯ್ಯ 2’ ತುಸು ಸಮಾಧಾನ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!