Sunday, December 10, 2023

Latest Posts

ಮೆಟಾವರ್ಸ್‌ ಜಗತ್ತನ್ನು ಎದುರುಗೊಳ್ಳೋದು ಹೇಗೆ? ಇಂಡಿಯಾ ಐಡಿಯಾ ಕಾನ್ಕ್ಲೇವ್‌ ನಲ್ಲಿ ಮುಕುಂದ ಸಿ ಆರ್‌ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಳೆದ ಮೂರುದಿನಗಳಿಂದ ಇಂಡಿಯಾ ಫೌಂಡೇಶನ್‌ ವತಿಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ʼ7 ನೇ ಇಂಡಿಯಾ ಐಡಿಯಾ ಕಾನ್ಕ್ಲೇವ್‌ʼ ಇಂದು ಸಮಾರೋಪಗೊಂಡಿತು. ಮೆಟಾ ಜಗತ್ತಿನ ಸವಾಲುಗಳನ್ನು ಎದುರಿಸುವುದು ಹೇಗೆ ಎಂಬ ವಿಷಯದ ಹಿನ್ನೆಲೆಯಲ್ಲಿ ಸಮಾಜದ ವಿವಿಧ ಗಣ್ಯರೊಂದಿಗೆ ವಿವಿಧ ಚಿಂತನಾ ಗೋಷ್ಟಿಗಳಿಗೆ ಈ ಕಾನ್ಕ್ಲೇವ್‌ ಸಾಕ್ಷಿಯಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾ.ಸ್ವ.ಸೇ.ಸಂಘದ ಸಹಸರಕಾರ್ಯವಾಹ ಸಿ.ಆರ್.‌ ಮುಕುಂದ್‌ ಮಾತನಾಡಿ “ಭಾರತದ ಅಭಿವೃದ್ಧಿ ಹಾಗೂ ಭವಿಷ್ಯತ್ತಿಗೆ ಸಂಬಂಧಿಸಿದಂತೆ ಕಳೆದ ಹಲವಾರು ವರ್ಷಗಳಿಂದ ಇಂಡಿಯಾ ಫೌಂಡೇಶನ್‌ ಚಿಂತನಾ ಕೂಟಗಳನ್ನು ನಡೆಸಿಕೊಂಡು ಬರುತ್ತಿದೆ. ನಮ್ಮ ಬಳಿ ಅಪಾರವಾದ ಮಾನವಸಂಪನ್ಮೂಲವಿದೆ. ಈ ಜನಸಂಖ್ಯಾ ಲಾಭಾಂಶವನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಸಂಬಂಧಿತ ಕ್ಷೇತ್ರಗಳಲ್ಲಿ ಭಾರತವು ದೊಡ್ಡ ಪಾತ್ರವನ್ನು ನಿಭಾಯಿಸಬಲ್ಲುದು. ಮುಂದಿನ ಪೀಳಿಗೆಯ ಯುವ ಮನಸ್ಸುಗಳಿಗೆ ಈಗಿನಿಂದಲೆ ಉತ್ತಮಶಿಕ್ಷಣ ನೀಡುವ ಮೂಲಕ ಅವರ ಕ್ರಿಯಾತ್ಮಕ ಶಕ್ತಿಯ ಸದುಪಯೋಗ ಪಡೆದುಕೊಂಡು ಮುಂದಿನ ಮೆಟಾ ಜಗತ್ತಿಗೆ ಸಜ್ಜಾಗಬೇಕಿದೆ” ಎಂದು ಹೇಳಿದರು.

“ಕ್ರಿಯಾತ್ಮಕ ಸಮತೋಲನವು ನಮ್ಮ ಸಂಸ್ಕೃತಿಯಲ್ಲೇ ಇದೆ. ಇದರ ಲಾಭ ಪಡೆದು ಜಗತ್ತಿನಲ್ಲೇ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವುದರೊಂದಿಗೆ ಈ ಸಂತುಲನವನ್ನು ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕು. ನಮ್ಮ ಪೂರ್ವಜರು ಸಂತುಲಿತ ಬದುಕನ್ನು ಬಾಳಿ ತೋರಿಸಿದ್ದಾರೆ. ಹಾಗಾಗಿಯೇ ಅನೇಕ ಕಷ್ಟ,ಅಂಧಕಾರಗಳ ನಡುವೆಯೂ ಭಾರತವು ಸ್ಥಿರವಾಗಿ ನಿಂತಿದೆ. ಇದನ್ನೇ ಮಧ್ಯಮ ಮಾರ್ಗವೆಂದು ಗೌತಮ ಬುದ್ಧ ಉಪದೇಶಿಸಿದ್ದಾನೆ. ಈ ಕ್ರಿಯಾತ್ಮಕ ಸಂತುಲನವು ತಂತ್ರಜ್ಞಾನದೊಂದಿಗೆ ಸಮ್ಮಿಳಿತವಾದಾಗ ದೇಶವು ಮೆಟಾ ಜಗತ್ತಿನಲ್ಲಿ ಸದೃಢವಾಗಿ ಮುಂದುವರಿಯಲು ಸಾಧ್ಯ” ಎಂದು ರಾ.ಸ್ವ.ಸೇ.ಸಂಘದ ಸಹಸರಕಾರ್ಯವಾಹ ಸಿ.ಆರ್.‌ಮುಕುಂದ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಇಂಡಿಯಾ ಫೌಂಡೇಶನ್‌ ನಿರ್ದೇಶಕರಲ್ಲೊಬ್ಬರಾದ ರಾಮ್‌ ಮಾಧವ್‌ ಮಾತನಾಡಿ “ತಂತ್ರಜ್ಞಾನವೆಂಬುದು ನಮ್ಮಿಂದಲೇ ಸೃಷ್ಟಿಯಾದದ್ದು. ನಾವೇ ಅದಕ್ಕೆ ರೂಪುಕೊಟ್ಟ ಶಿಲ್ಪಿಗಳು. ಈಗ ಪ್ರಸ್ತುತ ನಮ್ಮಿಂದಲೇತಯಾರಿಸಲ್ಪಟ್ಟ ಯಂತ್ರಗಳು, ತಂತ್ರಜ್ಞಾನಗಳು ನಮಗಿಂತಲೂ ಹೆಚ್ಚು ಬುದ್ಧಿಶಾಲಿಯಾಗುತ್ತಿವೆ. ಇದನ್ನೇ ಮೆಟಾವರ್ಸ್‌ ಎಂದು ಸಂಕ್ಷೇಪಿಸಬಹುದು. ಈ ಮೆಟಾವರ್ಸ್‌ ನಲ್ಲಿ ಮಾನವನಿಗಿಂತ ಹೆಚ್ಚು ಬುದ್ಧಿಮತ್ತೆ ಹೊಂದಿರುವ ಯಂತ್ರಮಾನವರು, ತಂತ್ರಜ್ಞಾನಗಳನ್ನು ಎದುರಿಸಲು ಸಿದ್ದವಾಗಬೇಕಿದೆ. ಉದಾಹರಣೆಗೆ ಆಲ್ಫಾ ಝೀರೋ ಎಂಬ ತಂತ್ರಜ್ಞಾನವೊಂದು ಕೇವಲ ಒಂದೇ ನಿಮಿಷದಲ್ಲಿ ಪ್ರಪಂಚದ ಶ್ರೇಷ್ಠ ಚೆಸ್‌ ಆಟಗಾರ ಗ್ಯಾರಿಕ್ಯಾಸ್ಪರೋನನ್ನು ಸೋಲಿಸಬಲ್ಲುದು. ನಾವೀಗ ಅಂತಹ ತಂತ್ರಜ್ಞಾನ ಜಗತ್ತಿಗೆ ಕೆಲವೇ ವರ್ಷಗಳಲ್ಲಿ ಕಾಲಿಡುತ್ತಿದ್ದೇವೆ. ಆ ಕಾಲ ತುಂಬಾ ದೂರವೇನಿಲ್ಲ” ಎಂದರು.

“ಈಗಾಗಲೇ ಕೃತಕ ಬುದ್ಧಿಮತ್ತೆಯು ಎಲ್ಲಡೆ ವ್ಯಾಪಕವಾಗುತ್ತಿದೆ. ಈ ತಂತ್ರಜ್ಞಾನಗಳು ಹೆಚ್ಚು ಬುದ್ಧಿವಂತವಾಗಿರುತ್ತವೆ ಎನ್ನುವುದು ಸರಿಯೇ ಆದರೆ ಅವುಗಳಿಗೆ ಮಾನವೀಯ ಹೃದಯವಿರುವುದಿಲ್ಲ. ಅವುಗಳಿಗೆ ಆಜ್ಞೆ ರವಾನಿಸಲು ಮಾನವೀಯ ಶಕ್ತಿಯ ಅವಶ್ಯಕತೆಯಿದೆ. ಇಂತಹ ಸುಧಾರಿತ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತೀಯ ವಿಚಾರಧಾರೆಗಳ ಮೂಲಕ ಉತ್ತರ ಕಂಡು ಕೊಳ್ಳಲೆಂದೇ ಇಂಡಿಯಾ 2.0 ಚಿಂತನಾ ಕೂಟ ಆಯೋಜಿಸಲಾಗಿತ್ತು. ನಾವೆಲ್ಲರೂ ನಮ್ಮ ಪೂರ್ವಾಗ್ರಹಗಳನ್ನು ಬಿಟ್ಟು ಮುಂದಿನ ತಂತ್ರಜ್ಞಾನ ಕ್ರಾಂತಿಯನ್ನು ಎದುರಿಸಲು ಸಜ್ಜಾಗಬೇಕಿದೆ.” ಎಂದು ಅಭಿಪ್ರಾಯ ಪಟ್ಟರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಮಾಜಿ ರಾಜ್ಯಸಭಾ ಸಂಸದ ಹಾಗೂ ಇಂಡಿಯಾ ಫೌಂಡೇಶನ್‌ ನಿರ್ದೇಶಕ ಸ್ವಪನ್‌ ದಾಸ್‌ ಗುಪ್ತಾ ತಮ್ಮ ಸಮಾರೋಪ ನುಡಿಗಳನ್ನಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!