“ಬೀದರ್ ಮಸೀದಿಯಲ್ಲಿ ವಿಜಯದಶಮಿ ಪೂಜೆ ಇದೇ ಮೊದಲೇನಲ್ಲ”

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಕ್ಟೋಬರ್ 6ರಂದು ವಿಜಯದಶಮಿ ಮೆರವಣಿಗೆಯಲ್ಲಿ ಹೋಗುತ್ತಿದ್ದ ಹಿಂದುಗಳ ಗುಂಪು ಬೀದರಿನ ಮೆಹಮೂದ್ ಗೆವಾನ್ ಮದರಸಾ ಮತ್ತು ಮಸೀದಿಗೆ ಬಲವಂತವಾಗಿ ನುಗ್ಗಿರುವ ಪ್ರಕರಣ ರಾಷ್ಟ್ರೀಯ ಮಾಧ್ಯಮದಲ್ಲೂ ಚರ್ಚೆ ಆಗುತ್ತಿದೆ. ಈ ಗುಂಪಿನ ಕೆಲವರ ವಿರುದ್ಧ ಎಫ್ ಐ ಆರ್ ದಾಖಲೆಯಾಗಿದೆ.

ಆದರೆ, ಹಿಂದುಗಳ ಗುಂಪು ಈ ವರ್ಷ ಏಕಾಏಕಿ ಮಸೀದಿಗೆ ನುಗ್ಗಿಬಿಟ್ಟಿತೇ ಎಂಬ ಪ್ರಶ್ನೆ ಹಾಕಿಕೊಂಡಾಗ ಅದಕ್ಕೆ ಇಲ್ಲ ಎಂಬ ಉತ್ತರವೇ ಎದುರು ಬರುತ್ತದೆ. ಅಂದರೆ, ವಿಜಯದಶಮಿ ಮೆರವಣಿಗೆ ವೇಳೆ ಆ ಮಸೀದಿಯನ್ನು ಪ್ರವೇಶಿಸಿ ಅದರ ಆವರಣದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದು ಪ್ರತಿವರ್ಷದ ವಿದ್ಯಮಾನ.

ಹಾಗಾದರೆ ಈ ಬಾರಿ ಇದೇಕೆ ವಿವಾದವಾಗಿದೆ ಮತ್ತು ಮತ್ತು ಕಾನೂನು ಕ್ರಮಗಳಿಗೆ ದಾರಿಯಾಗಿದೆ ಎಂಬುದಕ್ಕೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಉತ್ತರಿಸಿದ್ದಾರೆ. “ಪ್ರತಿವರ್ಷ ಮೆರವಣಿಗೆಯಲ್ಲಿ ಹೋಗುವವರ ಪೈಕಿ ನಾಲ್ಕೈದು ಮಂದಿ ಮಾತ್ರ ಒಳಗೆ ಹೋಗಿ ಪೂಜೆ ಮಾಡಿ ಬರುತ್ತಿದ್ದರು. ಈ ಬಾರಿ ಆ ಜಾಗದಲ್ಲಿ 25-30 ಮಂದಿ ಹೋಗಿದ್ದರಿಂದ ಹಾಗೂ ಇದನ್ನೇ ವಿಡಿಯೊ ತುಣುಕುಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಬಿತ್ತರಿಸಿದ್ದರಿಂದ, ಮಸೀದಿಗೆ ಬಲವಂತವಾಗಿ ನುಗ್ಗಿದ್ದಾರೆಂಬ ಭಾವನೆ ಬಂದಿದೆ. ಮಸೀದಿ ಆವರಣದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದು ಬಹಳ ಕಾಲದಿಂದ ನಡೆದುಬಂದಿರುವ ಪದ್ಧತಿ. ಈ ಬಗ್ಗೆ ಎರಡೂ ಸಮುದಾಯಗಳಿಗೆ ತಿಳಿದಿದೆ” ಎಂದಿದ್ದಾರೆ.

ಅಕ್ಟೋಬರ್ 6ರ ಇಂಡಿಯಾ ಟುಡೆ ಜಾಲತಾಣದ ವರದಿ ಅಲ್ಲಿನ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಡೆಕ್ಕಾ ಕಿಶೋರ ಬಾಬು ಎಂಬುವವರ ಹೇಳಿಕೆ ಪಡೆದಿದೆ. ಅವರು ಹೇಳಿರುವುದು- “ದಸರಾದಲ್ಲಿ ಮಸೀದಿ ಆವರಣಕ್ಕೆ ಬಂದು ಪೂಜೆ ಸಲ್ಲಿಸುವುದು ನಿಜಾಮರ ಕಾಲದಿಂದಲೂ ಇರುವಂಥದ್ದು. ಮೂರ್ನಾಲ್ಕು ಮಂದಿ ಇರುತ್ತಿದ್ದ ಜಾಗದಲ್ಲಿ ಈ ಬಾರಿ ಹೆಚ್ಚಿನ ಮಂದಿ ಬಂದಿದ್ದಾರೆ. ಮಸೀದಿಯ ಬೀಗ ಒಡೆದು ಅಕ್ರಮವಾಗಿ ಪ್ರವೇಶಿಸಿದಂಥ ಯಾವುದೇ ಘಟನೆ ನಡೆದಿಲ್ಲ.”

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!