ಹೊಸ ದಿಗಂತ ವರದಿ ಬೀದರ್:
ಗುರುವಾರ ನಗರದ ಡಿಸಿ ಕಚೇರಿ ಪಕ್ಕದ ಎಸ್ ಬಿಐ ಬ್ಯಾಂಕ್ ಎದುರು ನಡೆದ ಶೂಟೌಟ್, 83 ಲಕ್ಷ ರೂ. ದರೋಡೆ ಪ್ರಕರಣ ಸಂಬಂಧ ಇನ್ನೂ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿಲ್ಲ. ಖತರ್ನಾಕ್ ಖಿಲಾಡಿಗಳ ಬಂಧನಕ್ಕೆ ಕಲಬುರಗಿ ಐಜಿಪಿ ನೇತೃತ್ವದಲ್ಲಿ 8 ವಿಶೇಷ ತಂಡಗಳನ್ನು ರಚಿಸಿರುವ ಖಾಕಿ ಪಡೆ ಕರ್ನಾಟಕ ಸೇರಿದಂತೆ ನೆರೆಯ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಹ ಶೋಧ ಆರಂಭಿಸಿದೆ.
ಬೈಕ್ ಮೇಲೆ ಬಂದಿದ್ದ ಇಬ್ಬರು ಮುಸುಕುಧಾರಿಗಳು ಎಟಿಎಂಗೆ ಹಣ ತುಂಬುವ ಸಿಎಂಎಸ್ ಸಂಸ್ಥೆಯ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡು ಹಾರಿಸಿ ಹಣ ಲೂಟಿ ಮಾಡಿ ಎಸ್ಕೇಪ್ ಆಗಿದ್ದರು. ಶೂಟೌಟ್ ನಲ್ಲಿ ಗಿರಿ ವೆಂಕಟೇಶ ಮೃತಪಟ್ಟರೆ, ಶಿವಕುಮಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾಕಷ್ಟು ಜಾಲಾಟದ ಬಳಿಕವೂ ಘಟನೆ ನಡೆದ 24 ಗಂಟೆ ಬಳಿಕವೂ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿಲ್ಲ. ಹೀಗಾಗಿ ಅಪರಾಧ, ಐಟಿ ವಿಭಾಗ ಸೇರಿದಂತೆ ಎಲ್ಲ ಪರಿಣಿತರುಳ್ಳ ಪೊಲೀಸ್ ತಂಡಗಳು ವಿವಿಧೆಡೆ ಶೋಧ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣದ ಜಾಡು ಬೇಗ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.
ಈ ಮಧ್ಯೆ ಅಪರಾಧ ವಿಭಾಗದ ಎಡಿಜಿಪಿ ಪಿ. ಹರಿಶೇಖರನ್ ಶುಕ್ರವಾರ ಇಲ್ಲಿಗೆ ಧಾವಿಸಿದ್ದು, ಘಟನೆ ಸಂಬಂಧ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳ ಹೆಡೆಮುರಿ ಕಟ್ಟುವ ಜೊತೆಗೆ ಶೂಟೌಟ್ ಗ್ಯಾಂಗ್ ಜಾಲ ಭೇದಿಸಲು ಸ್ಕೆಚ್ ಹಾಕಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಐಜಿಪಿ ಅಜಯ್ ಹಿಲೋರಿ, ಎಸ್ ಪಿ ಪ್ರದೀಪ್ ಗುಂಟಿ ನೇತೃತ್ವದ 8 ವಿಶೇಷ ಟೀಮ್ ತನಿಖೆಯಲ್ಲಿ ತೊಡಗಿವೆ. ಬೇಗ ಆರೋಪಿಗಳ ಪತ್ತೆ ಹಚ್ಚಲಾಗುವುದು. ಹೈದರಾಬಾದ್ ನಲ್ಲಿ ನಡೆದ ಶೂಟೌಟ್ ಪ್ರಕರಣ ಹಾಗೂ ಬೀದರ್ ಗ್ಯಾಂಗ್ ಒಂದೇ ಇರುವ ಶಂಕೆಯಿದೆ. ಇದೆಲ್ಲದರ ಬಗ್ಗೆ ತನಿಖೆ ಮುಂದುವರಿದಿದೆ. ಇಲ್ಲಿ ಶೂಟೌಟ್ ಮಾಡಿದವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಇದೇ ಮಾದರಿ ಕೃತ್ಯ ಬೇರೆಡೆ ಸಹ ನಡೆಸಿದ ಸಾಧ್ಯತೆಗಳಿವೆ. ಬ್ಯಾಂಕ್ ನಿಂದ 87 ಲಕ್ಷ ರೂ. ತರಲಾಗಿತ್ತು. ಇದರಲ್ಲಿ ಲಕ್ಷ ಡಬ್ಬಾದಿಂದ ಬಿದ್ದಿದ್ದು, 83 ಲಕ್ಷ ರೂ. ಒಯ್ದಿರುವ ಮಾಹಿತಿ ಇದೆ. ಎಲ್ಲ ಮಗ್ಗುಲುಗಳಿಂದ ತನಿಖೆ ನಡೆದಿದೆ ಎಂದು ಹೇಳಿದರು.
ಸಚಿವ ಖಂಡ್ರೆ ಭೇಟಿ:
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶುಕ್ರವಾರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಡಿಜಿಪಿ, ಐಜಿಪಿ, ಎಸ್ ಪಿ ಜೊತೆ ಸಮಾಲೋಚನೆ ನಡೆಸಿ, ಈ ಪ್ರಕರಣದ ಜಾಡು ಬೇಗ ಪತ್ತೆ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದಿಟ್ಟ ಹೆಜ್ಜೆ ಇಡುವಂತೆ ಸೂಚಿಸಿದರು.
ನಾಲ್ವರ ಮೇಲೆ ಕೇಸ್:
ಶೂಟೌಟ್, ದರೋಡೆ ಸಂಬಂಧ ಇಬ್ಬರು ಅಪರಿಚಿತ ದರೋಡೆಕೋರರ ವಿರುದ್ಧ ಎ1 ಎಂದು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭದ್ರತಾ ಲೋಪ ಇತರೆ ಕಾರಣಕ್ಕಾಗಿ ಸಿಎಂಎಸ್ ಸಂಸ್ಥೆ ವ್ಯವಸ್ಥಾಪಕ, ಎಸ್ ಬಿಐ ಬ್ಯಾಂಕ್ ವ್ಯವಸ್ಥಾಪಕ ಮೇಲೂ ಪ್ರಕರಣ ದಾಖಲಾಗಿದೆ.