ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಭಾವನಾತ್ಮಕವಾಗಿದೆ. ವಾರದ ಮೊದಲ ದಿನವೇ ಎಲ್ಲ ಸ್ಪರ್ಧಿಗಳು ತಮ್ಮ ಕಷ್ಟವನ್ನು ನೆನೆದು ಬಿಗ್ ಬಾಸ್ ಎದುರು ಕಣ್ಣೀರಿಟ್ಟಿದ್ದರು. ಇದೀಗ ದೀಪಾವಳಿಯ ಪ್ರಯುಕ್ತ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳಿಗೆ ತಮ್ಮ ತಮ್ಮ ಮನೆಯಿಂದ ಬಂದ ಪತ್ರವೊಂದನ್ನು ನೀಡುತ್ತಿದ್ದಾರೆ.ಇದನ್ನು ಓದಿ ಎಲ್ಲರೂ ಕಣ್ಣೀರಿಟ್ಟಿದ್ದಾರೆ. ಆದರೆ, ಫ್ಯಾಮಿಲಿಯೇ ಇಲ್ಲದ, ತಂದೆ-ತಾಯಿಯನ್ನು ಕಳೆದುಕೊಂಡಿರುವ ಐಶ್ವರ್ಯ ಸಿಂಧೋಗಿ ಅವರಿಗೆ ಕೂಡ ಪತ್ರ ಬಂದಿದೆ.
ಅಪ್ಪ, ಅಮ್ಮ ಇಬ್ಬರನ್ನೂ ಕಳೆದುಕೊಂಡಿರುವ ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ ಅವರಿಗೆ ಸ್ವತಃ ಬಿಗ್ ಬಾಸ್ ಪತ್ರವನ್ನು ಬರೆದು ನೀವು ನನ್ನ ಕುಟುಂಬದವರು ಎಂದು ಹೇಳಿದ್ದಾರೆ.
ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರತಿ ಸೀಸನ್‌ನಲ್ಲಿಯೂ ಸ್ಪರ್ಧಿಗಳಿಗೆ ಒಂದು ತಿಂಗಳಾದ ನಂತರ ಅವರ ಮನೆಗಳಿಂದ ಪತ್ರಗಳನ್ನು ತರಿಸಿಕೊಟ್ಟು ಭಾವನಾತ್ಮಕವಾಗಿ ಅವರನ್ನು ಗಟ್ಟಿಗೊಳಿಸುವ ಕಾರ್ಯ ಮಾಡಲಾಗುತ್ತದೆ. ಅದರಂತೆ, ಹೊರ ಜಗತ್ತಿನ ಯಾವುದೇ ಸಂಪರ್ಕ ಇಲ್ಲದೇ ಮನೆಯವರನ್ನು ಬಿಟ್ಟು ಬಂದು ಬಿಗ್ ಬಾಸ್ ಮನೆಯ ಗೋಡೆಯೊಳಗಿರುತ್ತಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಿಗ್ ಬಾಸ್ ಮನೆಯೊಳಗೆ ಒಂದು ಟಾಸ್ಕ್ ನೀಡಿ ಅದರಲ್ಲಿ ಗೆದ್ದ ಸ್ಪರ್ಧಿಗಳಿಗೆ ಮನೆಯವರಿಂದ ಬರೆಯಲಾದ ಪತ್ರಗಳನ್ನು ಕೊಡಲಾಗುತ್ತದೆ. ಆದರೆ, ಇದೀಗ ಬಿಗ್ ಬಾಸ್ ಮನೆಯೊಳಗೆ ಬಂದಿರುವ ನಟಿ ಐಶ್ವರ್ಯಾ ಸಿಂಧೋಗಿ ಅವರು ಇತ್ತೀಚೆಗೆ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ, ಅವರಿಗೆ ಪತ್ರ ಬರೆಯುವಂತಹ ಆತ್ಮೀಯರು, ಸಂಬಂಧಿಕರು ಇಲ್ಲ. ಅವರಿಗೆ ಸ್ನೇಹುತರಷ್ಟೇ ಇದ್ದಾರೆ.
ಬಿಗ್ ಬಾಸ್ ಮನೆಯಲ್ಲಿನ ಬಹುತೇಕ ಸ್ಪರ್ಧಿಗಳಿಗೆ ಅವರವರ ಮನೆಗಳಿಂದ ಪತ್ರಗಳನ್ನು ತರಿಸಿಕೊಡಲಾಗಿದೆ. ಇದನ್ನು ಓದಿದ ಸ್ಪರ್ಧಿಗಳು ಸಂತಸಗೊಂಡಿದ್ದಾರೆ. ಆದರೆ, ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ ಅವರಿಗೆ ಪತ್ರ ಬರೆಯಲು ಕುಟುಂಬದವರಿಲ್ಲದ ಕಾರಣ ಯಾವುದೇ ಪತ್ರಗಳು ಕೂಡ ಬಂದಿಲ್ಲ. ಕೊನೆಗೆ, ಎಲ್ಲರಿಗೂ ಪತ್ರಗಳು ತಲುಪಿದ ನಂತರ ಶಿಶಿರ್ ಅವರು ಐಶ್ವರ್ಯ ಸಿಂಧೋಗಿ ಬಿಟ್ಟು ಎಲ್ಲರಿಗೂ ಪತ್ರ ಬಂದಿದ್ದು, ಅವುಗಳನ್ನು ತಲುಪಿಸಲಾಗಿದೆ ಎಂದು ಹೇಳುತ್ತಾರೆ. ಆಗ ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಕಣ್ಣೀರಿಡುತ್ತಾ ಕುಟುಂಬವನ್ನು ಕಳೆದುಕೊಂಡ ನೋವಿನಲ್ಲಿರುತ್ತಾಳೆ. ಎಆಗ ಬಿಗ್ ಬಾಸ್ ಮನೆಯಲ್ಲಿ ಬಜರ್ ಸೌಂಡ್ ಬಂದ ನಂತರ ಸ್ಟೋರ್ ರೂಮಿನಿಂದ ಒಂದು ಪತ್ರ ಬರುತ್ತದೆ. ಅದು ಐಶ್ವರ್ಯ ಅವರಿಗೆ ಬಂದ ಪತ್ರವಾಗಿರುತ್ತದೆ. ಅದನ್ನು ಸ್ವತಃ ಬಿಗ್ ಬಾಸ್ ಐಶ್ವರ್ಯ ಅವರಿಗೆ ಬರೆದಿರುತ್ತಾರೆ.
ಈ ಪತ್ರ ಐಶ್ವರ್ಯ ಕೈಗೆ ಸೇರಿದ ನಂತರ ಧ್ವನಿಯ ಮೂಲಕ ಮಾತನಾಡುವ ಬಿಗ್ ಬಾಸ್, ಪ್ರೀತಿಯ ಐಶ್ವರ್ಯ ನನ್ನದೊಂದು ಪತ್ರ. ನೀವು ನನ್ನ ಮನೆಗೆ ಆಗಮಿಸಿದ ಕ್ಷಣದಿಂದ ನೀವು ನನ್ನ ಕುಟುಂಬದವರಾಗಿದ್ದೀರಿ. ನಾನಿರುವೆ ನಿಮ್ಮೊಂದಿಗೆ, ಈ ಮನೆಯ ಸದಸ್ಯರಿದ್ದಾರೆ ನಿಮ್ಮೊಂದಿಗೆ. ಇಂತಿ ನಿಮ್ಮ ಬಿಗ್ ಬಾಸ್… ಎಂದು ಹೇಳುತ್ತಾರೆ. ಈ ಮೂಲಕ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯೊಬ್ಬರಿಗೆ ನೀವು ನನ್ನ ಕುಟುಂಬ ಎಂದು ಹೇಳುವ ಮೂಲಕ ಕನ್ನಡ ಬಿಗ್ ಬಾಸ್ ಹೊಸದೊಂದು ಭಾವನಾತ್ಮಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ.