ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದಲ್ಲಿ ಶಾಂತಿಯತ್ತ ಸಾಗುತ್ತಿದ್ದ ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ ಇದೀಗ ಮತ್ತೆ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಮಹತ್ವದ ಮಾತುಕತೆಯಿಂದ ಹಿಂದೆ ಸರಿಯುವ ಸುಳಿವು ನೀಡಿರುವ ಇರಾನ್, ಲೆಬನಾನ್ನಲ್ಲಿ ನಡೆಯುತ್ತಿರುವ ದಾಳಿಗಳು ನಿಲ್ಲದ ಹೊರತು ಯಾವುದೇ ಶಾಂತಿ ಚರ್ಚೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವೆ ನಿರ್ಣಾಯಕ ಮಾತುಕತೆ ನಡೆಯಲಿದೆ ಎಂಬ ವರದಿಗಳು ಹರಿದಾಡುತ್ತಿದ್ದರೂ, ಇರಾನ್ ಸರ್ಕಾರದ ಅಧಿಕೃತ ಮೂಲಗಳು ಅದನ್ನು ತಳ್ಳಿ ಹಾಕಿವೆ. ಲೆಬನಾನ್ನಲ್ಲಿ ಕದನ ವಿರಾಮ ಜಾರಿಯಾಗುವವರೆಗೂ ಅಮೆರಿಕದೊಂದಿಗೆ ಯಾವುದೇ ಚರ್ಚೆಗೆ ಯೋಜನೆ ಇಲ್ಲ ಎಂದು ಟೆಹ್ರಾನ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:
ಇದಕ್ಕೆ ಹಿನ್ನೆಲೆ ಎಂದರೆ, ಇಸ್ರೇಲ್ ಲೆಬನಾನ್ ಮೇಲೆ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಹಲವು ಪ್ರದೇಶಗಳಲ್ಲಿ ಭಾರೀ ಪ್ರಾಣಹಾನಿ ಸಂಭವಿಸಿದೆ. ಈ ಬೆಳವಣಿಗೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್, ಹಾರ್ಮುಜ್ ಜಲಸಂಧಿ ಸಂಚಾರದ ಮೇಲೂ ಮತ್ತೆ ನಿರ್ಬಂಧ ವಿಧಿಸುವ ಎಚ್ಚರಿಕೆಯನ್ನು ನೀಡಿದೆ. ಇದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿಸಿದೆ.
ಇರಾನ್ ವಿದೇಶಾಂಗ ವಲಯದ ಮೂಲಗಳ ಪ್ರಕಾರ, ಲೆಬನಾನ್ ಯುದ್ಧ ನಿಲ್ಲಿಸುವುದು ಶಾಂತಿ ಪ್ರಸ್ತಾವನೆಯ ಪ್ರಮುಖ ಷರತ್ತುಗಳಲ್ಲಿ ಒಂದಾಗಿತ್ತು. ಆದರೆ ಇಸ್ರೇಲ್ ಈ ನಿಲುವಿಗೆ ಮಣಿಯದ ಕಾರಣ ಒಪ್ಪಂದವೇ ಕುಸಿಯುವ ಹಂತಕ್ಕೆ ಬಂದಿದೆ.
ಒಟ್ಟಾರೆ, ಲೆಬನಾನ್ ರಣಾಂಗಣದಲ್ಲಿನ ಉದ್ವಿಗ್ನತೆ ಅಮೆರಿಕ-ಇರಾನ್ ಮಾತುಕತೆಗಳ ಭವಿಷ್ಯವನ್ನೇ ಅಸ್ಥಿರಗೊಳಿಸಿದ್ದು, ಜಾಗತಿಕ ರಾಜಕೀಯ ಮತ್ತು ತೈಲ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.



