Friday, March 24, 2023

Latest Posts

ಬಜೆಟ್‌ನಲ್ಲಿ ಸಕ್ಕರೆ ನಾಡಿಗೆ ಭರ್ಜರಿ ಗಿಫ್ಟ್‌: ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್ ಹರ್ಷ

ಹೊಸದಿಗಂತ ವರದಿ,ಮಂಡ್ಯ :

ಮೈಷುಗರ್‌ನಲ್ಲಿ ಎಥನಾಲ್ ಉತ್ಪಾದನಾ ಘಟಕ ಸ್ಥಾಪನೆ, ಐಐಟಿ ಮಾದರಿಯಲ್ಲಿ ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಕೆಐಟಿ)ಗಳಾಗಿ ಉನ್ನತೀಕರಿಸಲು ಆಯ್ಕೆ ಮಾಡಿಕೊಂಡಿರುವ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಕೆ.ಆರ್. ಪೇಟೆ ಇಂಜಿನಿಯರಿಂಗ್ ಕಾಲೇಜನ್ನು ಸೇರಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ತಿಳಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಮೊದಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಥಗಿತಗೊಂಡಿದ್ದ ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಪ್ರಾರಂಭಿಸುವುದಾಗಿ ಹೇಳಿ, ಅದರಂತೆ ಪ್ರಾರಂಭಿಸುವ ಮೂಲಕ ಮಂಡ್ಯ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ನೀಡಿದ್ದರು. ಈ ಬಾರಿ ಮತ್ತೂ ಒಂದು ಹೆಜ್ಜೆ ಮುಂದೆ ಇಟ್ಟು ಕಾರ್ಖಾನೆ ಆವರಣದಲ್ಲಿ ಎಥನಾಲ್ ಘಟಕ ಸ್ಥಾಪನೆಗೆ ಹಸಿರು ನಿಶಾನೆ ತೋರಿಸುವ ಮೂಲಕ ರೈತರಿಗೆ ಹೊಸ ಯೋಜನೆಯನ್ನು ಪ್ರಕಟಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಚಿರತೆ ಹಾವಳಿಯನ್ನು ತಡೆಗಟ್ಟುವ ಉದ್ದೇಶದಿಂದ ಚಿರತೆ ಕಾರ‌್ಯಪಡೆ ರಚನೆಗೆ 199 ಸಿಬ್ಬಂದಿ ನೇಮಕ ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಇದು ಜಿಲ್ಲೆಯ ಜನರಿಗೆ ತುಸು ನೆಮ್ಮದಿ ತರಿಸಿದೆ ಎಂದು ತಿಳಿಸಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸುವ ಮೂಲಕ ಆ ಭಾಗದ ನೀರಾವರಿ ಯೋಜನೆಗೆ ಒತ್ತು ನೀಡಿದ್ದಾರೆ ಎಂದು ಹೇಳಿದ್ದಾರೆ.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌)ನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಮತಿಸಿದ್ದಾರೆ. ಮಂಡ್ಯ ವಿವಿಯನ್ನು ಸಂಯೋಜಿತ ವಿವಿಯಾಗಿ ಪರಿವರ್ತಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ಸುಸಜ್ಜಿತ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪಿಸುವ ಮೂಲಕ ಜಿಲ್ಲೆಯ ಜನರಿಗೆ ಭರ್ಜರಿ ಗಿಫ್ಟ್‌ ನೀಡಿದ್ದಾರೆ ಎಂದು ಬಣ್ಣಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!