ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಅಂತ್ಯವಾಗಿದೆ.
ಬಳಿಕ ಮಾತನಾಡಿದ ಅವರು, ರೈತರಿಗೆ, ಗ್ರಾಹಕರಿಗೆ ತೊಂದರೆಯಾಗದಂತೆ ನಂದಿನಿ ಹಾಲಿನ ದರ ಏರಿಕೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಹಾಲಿನ ದರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ದರ ಏರಿಕೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಕರ್ನಾಟಕ ರಾಜ್ಯ ಹಾಲು ಮಹಾ ಮಂಡಳಕ್ಕೆ (ಕೆಎಂಎಫ್) ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಹಾಲಿನ ದರ ಏರಿಕೆ ಇಲ್ಲ, ದರ ಏರಿಕೆ ಬಗ್ಗೆ ಸೂಕ್ತ ನಿರ್ಧಾರ ಮಾಡಲು ಕೆಎಂಎಫ್‌ನವರು ಎರಡು ದಿನ ಸಮಯ ಕೇಳಿದ್ದಾರೆ. ಹೀಗಾಗಿ ದರ ಪರಾಮರ್ಶೆ ಮಾಡಲು 2 ದಿನ ಸಮಯ ನೀಡಲಾಗಿದೆ. ಈ ಹಿಂದೆ ನಿರ್ಧರಿಸಿದ್ದ ದರ ಬೇಡ ಎಂದು ಸೂಚಿಸಲಾಗಿದೆ. ಹಾಗಾಗಿ ಮತ್ತೊಂದು ಸುತ್ತಿನ ಸಭೆ ನಡೆಸಿ ದರ ಏರಿಕೆ ಬಗ್ಗೆ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ನವೆಂಬರ್ 14ರಂದು ಕೆಎಂಎಫ್ ನಂದಿನಿ ಹಾಲಿನ ದರವನ್ನು ಲೀಟರ್‌ಗೆ 3 ರೂ.ನಂತೆ ಹೆಚ್ಚಿಸಲಾಗಿದೆ. ಮೊಸರಿನ ದರವನ್ನೂ 3 ರೂಪಾಯಿ ಹೆಚ್ಚಿಸಲಾಗಿತ್ತು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ತಡೆ ನೀಡಿದ್ದರು.