BIG NEWS | ಮಾಜಿ ಸಚಿವ ಎಚ್.‌ಡಿ. ರೇವಣ್ಣ ಎಸ್‌ಐಟಿ ಕಸ್ಟಡಿಗೆ: ಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆಸಂಬಂಧಪಟ್ಟಂತೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನವಾಗಿರುವ ಮಾಜಿ ಸಚಿವ ಎಚ್.‌ಡಿ. ರೇವಣ್ಣ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಇಂದು ಭಾನುವಾರ ಕೋರ್ಟ್‌ ರಜೆ ಇರುವ ಹಿನ್ನೆಲೆಯಲ್ಲಿ ಎಚ್.ಡಿ. ರೇವಣ್ಣ ಅವರನ್ನು ಕೋರಮಂಗಲದಲ್ಲಿರುವ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ನಿವಾಸಕ್ಕೆ ಕರೆತರಲಾಗಿತ್ತು. ಜಡ್ಜ್‌ ಮುಂದೆ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದರು.

ಈ ವೇಳೆ ಎಸ್‌ಐಟಿ ಪರ ವಕೀಲರು, ಪ್ರಕರಣದ ತೀವ್ರತೆಯನ್ನು ವಿವರಿಸಿ ರೇವಣ್ಣ ಅವರನ್ನು ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದರು. ಆದರೆ, ಇದಕ್ಕೆ ರೇವಣ್ಣ ಪರ ವಕೀಲರಾದ ಮೂರ್ತಿ ಡಿ. ನಾಯಕ್‌ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಎಸ್‌ಐಟಿಯವರು ತಮ್ಮ ಕಕ್ಷಿದಾರರಿಗೆ ಕಿರುಕುಳವನ್ನು ನೀಡುತ್ತಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ವಾದವನ್ನು ಮಂಡಿಸಿದರು.

ಈ ವೇಳೆ ರಿಮೈಂಡ್‌ ಕಾಪಿ‌ಯನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಿದ್ದಾರೆ. ಸುಮಾರು 15 ಅಂಶಗಳನ್ನು ಉಲ್ಲೇಖ ಮಾಡಿ 5 ದಿನಗಳ ಕಾಲ ಕಸ್ಟಡಿಗೆ ವಹಿಸುವಂತೆ ಕೋರಿದ್ದಾರೆ. ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ರವೀಂದ್ರ ಕುಮಾರ್ ಬಿ. ಕಟ್ಟಿಮನಿ ಅವರು, ಎಚ್‌.ಡಿ. ರೇವಣ್ಣ ಅವರನ್ನು ಐದು ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.

ಎಚ್.ಡಿ. ರೇವಣ್ಣ‌ ಪ್ರಭಾವಿ ನಾಯಕ ಹಾಗೂ ಶಾಸಕರಾಗಿರುವ ಕಾರಣ ಈಗಾಗಲೇ ಕೋರಮಂಗಲದ ನ್ಯಾಯಾಧೀಶರ ಮನೆ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಮನೆಯ ಮುಂಭಾಗದಲ್ಲಿ ‌ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಭದ್ರತೆಯೊಂದಿಗೆ ಅವರನ್ನು ಜಡ್ಜ್‌ಗೆ ಹಾಜರುಪಡಿಸಲಾಯಿತು.

ರೇವಣ್ಣಗೆ ಮತ್ತೊಮ್ಮೆ ಮೆಡಿಕಲ್ ಟೆಸ್ಟ್
ನ್ಯಾಯಾಧೀಶರ ಮುಂದೆ ಎಚ್.ಡಿ. ರೇವಣ್ಣ ಅವರನ್ನು ಹಾಜರುಪಡಿಸುವ ಮುನ್ನ ಬೋರಿಂಗ್‌ ಆಸ್ಪತ್ರೆಯಲ್ಲಿ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ಹೃದಯ ತಜ್ಞರು ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ತಜ್ಞರ ಬಳಿ ತಪಾಸಣೆ ನಡೆಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!