ಹೊಸದಿಗಂತ ವರದಿ ,ಹಾವೇರಿ:
ಲೋಕಸಭಾ ಚುನಾವಣೆ ನಂತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅದೂ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಗೆಲುವು ಕಂಡಿರುವುದು ಶುಭಸಂಕೇತವಾಗಿದೆ. ಬಿಜೆಪಿಯಲ್ಲಿನ ಒಗ್ಗಟ್ಟಿಗೆ ಇದು ಪ್ರತೀಕವಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ನಗರಸಭೆಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಇದು ರಾಜಕೀಯ ಪರಿವರ್ತನೆ ಕಾಲ. ಬರುವ ದಿನಗಳಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿಯಲ್ಲೂ ಬದಲಾವಣೆ ಸಾಧ್ಯವಿದೆ ಎಂದರು.
ಇನ್ನು ತಮ್ಮ ಹಿಂದೆ ಇರುವವರೇ ತಮ್ಮನ್ನು ಸಿಎಂ ಹುದ್ದೆಯಿಂದ ಇಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ಉತ್ತರಿಸಿದ ಅವರು, ಇದು ಸ್ವಲ್ಪ ತಡವಾಗಿ ಸಿದ್ಧರಾಮಯ್ಯ ಅವರ ಅರಿವಿಗೆ ಬಂದಿದೆ. ಪ್ರಮುಖವಾಗಿ ರಾಜಕೀಯ ಮತ್ತು ಕಾನೂನು ಹೋರಾಟ ಎರಡರಲ್ಲೂ ಸಿದ್ದರಾಮಯ್ಯ ಹೇಗೆ ಉಪಯೋಗ ಮಾಡಿಕೊಂಡು ಮುಂದುವರೆಯುತ್ತಾರೆ ಎಂಬುದನ್ನು ಕಾದು ನೋಡೋಣ, ಈ ಎರಡರಲ್ಲೂ ಅವರಿಗೆ ಪರೀಕ್ಷೆ ಇವೆ ಎಂದರು.
ನಾವು ಆಪರೇಷನ್ ಕಮಲ ಮಾಡಲ್ಲ, ಅದರ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಬೃಹತ್ ರಾಜಕೀಯ ಬದಲಾವಣೆ ನಡೆಯಲಿದೆ. ಈ ಹಿಂದೆ ದೇವರಾಜ ಅರಸು ಇದ್ದಾಗ ಒಂದೇ ದಿನ ೮೬ಶಾಸಕರು ಗುಂಡೂರಾವ ಪರವಾಗಿ ನಿಂತರು. ವಿರೇಂದ್ರ ಪಾಟೀಲರು ಸಿಎಂ ಇದ್ದಾಗ ೧೮೩ ಶಾಸಕರು ಒಂದೇ ಕಾಲಕ್ಕೆ ಬದಲಾದ ವಿದ್ಯಮಾನ ರಾಜ್ಯದಲ್ಲಿ ನಡೆದಿದ್ದು ಅಂಥ ನೀರೀಕ್ಷೆ ಮಾಡಬಹುದು ಎಂದ ಅವರು ಶಿಗ್ಗಾಂವಿ ಉಪಚುನಾವಣೆ ಕುರಿತು ಮಾತನಾಡಲು ನಿರಾಕರಿಸಿದರು.