ಹೊಸದಿಗಂತ ವರದಿ ,ರಾಯಚೂರು :
ಬಂಗಾಳಕೊಲ್ಲಿಯಲ್ಲಿ ಸಂಭವಿಸಿರುವ ವಾಯುಭಾರ ಕುಸಿತದಿಂದ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವ ಪರಿಣಾಮ ವ್ಯಕ್ತಿಯೋರ್ವರು ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ತಾಲೂಕಿನ ಪತ್ತೆಪೂರ ಬಳಿಯ ಗೋಕುಲಸಾಬ್ ಹಳ್ಳದಲ್ಲಿ ಈ ಘಟನೆ ಸಂಭವಿಸಿದ್ದು ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿಯನ್ನು ತಾಲೂಕಿನ ಜಾಗೀರ ವೆಂಕಟಾಪುರ ಗ್ರಾಮದ ಬಸವರಾಜ್ (೩೩) ಎಂದು ಗುರುತಿಸಲಾಗಿದೆ.
ಬಸವರಾಜ ರಾಯಚೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಸನಿರ್ವಹಣೆ ಮಾಡುತ್ತಿದ್ದರು. ಮಂಗಳವಾರ ಮಧ್ಯಾಹ್ನ ಮತ್ತು ಸಂಜೆ ಸುರಿದ ಮಳೆಯಿಂದ ಗೋಕುಲಸಾಬ್ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿತ್ತು.
ಈ ಹಳ್ಳವನ್ನು ಬಸವರಾಜ ಮತ್ತಿತರ ೭-೮ ಜನರು ಸೇರಿ ದಾಟುತ್ತಿದ್ದರು ಈ ಸಂದರ್ಭದಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದ್ದಿಲ್ಲ. ಈ ಸಂದರ್ಭದಲ್ಲಿ ಹಳ್ಳದಲ್ಲಿ ಹೆಚ್ಚಿನ ನೀರಿಲ್ಲ ಎಂದು ದಾಟುತ್ತಿದ್ದವರಿಗೆ ಹಳ್ಳದ ಸೇತುವೆಯ ಸ್ವಲ್ಪ ಭಾಗಕ್ಕೆ ಬಂದಾಗ ಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ. ಇದರಿಂದ ಹಳ್ಳ ದಾಟುತ್ತಿದ್ದವರು ನೀರಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡಿದೆ.
ಬಸವರಾಜರೊಂದಿಗೆ ವೆಂಕಟಾಪುರ ಗ್ರಾಮದ ಜನತೆಯೂ ಕೆಲವರಿದ್ದರು. ಇವರೂ ಸಹ ನೀರಿನಲ್ಲಿ ಕೊಚಚಿ ಹೋಗಿದ್ದರು ಆದರೆ ಇವರೆಲ್ಲ ಈಜಿ ದಡ ಸೇರಿದ್ದಾರೆ ಆದರೆ ಬಸವರಾಜ ಅವರಿಗೆ ಈಜಿ ದಡಸೇರುವುದಕ್ಕೆ ಸಾಧ್ಯವಾಗದ ಹಿನ್ನಲೆಯಲ್ಲಿ ಇವರು ನೀರಿನಪಾಲಾಗಿದ್ದಾರೆ. ಇವರನ್ನು ಕಳೆದ ರಾತ್ರಿಯಿಂದಲೇ ಹುಡುಕಲಾಗುತ್ತಿದೆ ಆದರೆ ಇಂದಿನವರೆಗೂ ಅವರು ಪತ್ತೆಯಾಗಿಲ್ಲ.
ಕೆಲಸ ಮುಗಿಸಿ ರಾತ್ರಿ ಗ್ರಾಮಕ್ಕೆ ತೆರಳುತ್ತಿದ್ದರು ಬಸವರಾಜ. ಹಳ್ಳದಲ್ಲಿ ನೀರು ಹೆಚ್ಚಿದ್ದರಿಂದ ಬೈಕನ್ನು ಹಳ್ಳದ ದಡದಲ್ಲಿ ನಿಲ್ಲಿಸಿ ೭-೮ ಜನ ಸೇರಿ ಒಬ್ಬರಿಗೊಬ್ಬರು ಕೈಗಳನ್ನು ಹಿಡಿದುಕೊಂಡು ಹಳ್ಳವನ್ನು ದಾಟುತ್ತಿರುವಾಗ ಈ ಘಟನೆ ಸಂಭವಿಸಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.