Wednesday, February 21, 2024

ಲೋಕಸಭೆ ಚುನಾವಣೆಗೂ ಮುಂಚೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ರಾಜಕೀಯ ಬೆಳವಣಿಗೆ: ಬೊಮ್ಮಾಯಿ

ಹೊಸದಿಗಂತ ವರದಿ, ಬೆಂಗಳೂರು:

ಲೋಕಸಭೆ ಚುನಾವಣೆ ಮುಂಚೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಪ್ರಮಾಣದ ರಾಜಕೀಯ ಬೆಳವಣಿಗೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಕಾಂಗ್ರೆಸ್ ಮೇಲಿನ ಪ್ರೀತಿಯಿಂದ ಹೋಗಿರಲಿಲ್ಲ. ಬಿಜೆಪಿಯಲ್ಲಿ ಆಗಿರುವ ಬೇಸರದಿಂದ ಕಾಂಗ್ರೆಸ್ ಗೆ ಹೋಗಿದ್ದರು.

ಅವರನ್ನು ನಾನು ಜನಸಂಘದಿಂದ ಬಹಳ ಹತ್ತಿರದಿಂದ ನೋಡಿದ್ದೇನೆ. ಅವರಿಗೆ ಕಾಂಗ್ರೆಸ್ ಡಿಎನ್ ಎ ಒಗ್ಗುವುದಿಲ್ಲ. ಶೆಟ್ಟರ್ ಅವರ ದೇಹ ಮಾತ್ರ ಕಾಂಗ್ರೆಸ್ ಗೆ ಹೋಗಿತ್ತು. ಅವರ ಮನಸ್ಸು ಬಿಜೆಪಿಯಲ್ಲಿಯೇ ಇತ್ತು. ಅವರಿಗೆ ಕಾಂಗ್ರೆಸ್ ಸೇರಿದ ಮೇಲೆ ಅಲ್ಲಿನ ಮನಸ್ಥಿತಿ ಅರ್ಥವಾಗಿದೆ‌. ಇದು ಬಿಜೆಪಿ ಮತ್ತು ಜಗದೀಶ್ ಶೆಟ್ಟರ್ ಅವರಿಗೂ ಅನಕೂಲವಾಗಲಿದೆ ಎಂದು ಹೇಳಿದರು.

ಇದು ಕೇವಲ ಆರಂಭ. ಮುಂದಿನ ದಿನಗಳಲ್ಲಿ ಕೇವಲ ಬಿಜೆಪಿ ನಾಯಕರಷ್ಟೇ ಘರ್ ವಾಪಸಿ ಆಗುವುದಿಲ್ಲ. ಕಾಂಗ್ರೆಸ್ ನ ಪ್ರಮುಖ ನಾಯಕರೂ ಕೂಡ ಪಕ್ಷಕ್ಕೆ ಬರಲಿದ್ದಾರೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಇಬ್ಬಾಗವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಜಗದೀಶ್ ಶೆಟ್ಟರನ್ನು ಯಾರೂ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಯಾವಾಗಲೂ ಬ್ಲಾಕ್ ಮೇಲ್ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಇಡೀ ದೇಶದಲ್ಲಿ ದೇಶವೇ ಮೊದಲು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಸಿದ್ದಾಂತವಾಗಿದೆ. ಈಗ ಎಡ, ಬಲ ಸಿದ್ದಾಂತ ಇಲ್ಲ. ದೇಶದ ಅಭಿವೃದ್ದಿ ಮೊದಲ ಆದ್ಯತೆ, ಈಗ ಅದೇ ರಾಜಕೀಯದ ಸಿದ್ದಾಂತವಾಗಿದೆ ಎಂದು ಹೇಳಿದರು.

ಬಿಜೆಪಿ ಯಾವುದೇ ಸಮುದಾಯಕ್ಕೆ ಸೀಮಿತವಾದ ಪಕ್ಷವಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಇದೆ. ಅದಕ್ಕೆ ಜಗದೀಶ್ ಶೆಟ್ಟರ್ ಬಲ ಸೇರ್ಪಡೆಯಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಯಾರಿಗೆ ಯಾವುದೇ ಕ್ಷೇತ್ರದ ಟಿಕೆಟ್ ನೀಡಿದರೂ ಅವರ ಪರವಾಗಿ ನಾನು ರಾಜ್ಯಾದ್ಯಂತ ಕೆಲಸ ಮಾಡುತ್ತೇನೆ. ನಾವೆಲ್ಲರೂ ಸೇರಿ ಮತ್ತೆ ಮೋದಿಯವರನ್ನು ಮೂರನೇ ಬಾರಿ ಪ್ರಧಾನಮಂತ್ರಿ ಮಾಡಲು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!