ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀಟ್-ಯುಜಿ (NEET-UG) ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ನಡೆದ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪಶ್ಚಿಮ ಬಂಗಾಳ ಸರ್ಕಾರ ದೊಡ್ಡ ಸಮಾಧಾನಕರ ಸುದ್ದಿ ನೀಡಿದೆ. ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಠಿಣ ಅಥವಾ ಬಲವಂತದ ಪೊಲೀಸ್ ಕ್ರಮ ಜರುಗಿಸುವುದಿಲ್ಲ ಎಂದು ಬಂಗಾಳ ಸರ್ಕಾರ ಮಂಗಳವಾರ ಅಧಿಕೃತವಾಗಿ ತಿಳಿಸಿದೆ.
ಸಾಮಾನ್ಯ ವಿದ್ಯಾರ್ಥಿಗಳಿಗೆ ಮಾತ್ರ ವಿನಾಯಿತಿ
ಜುಲೈ 28 ರಂದು ಬಂದ ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದಂತೆ ರಾಜ್ಯ ಗೃಹ ಇಲಾಖೆಯು ಈ ಸುತ್ತೋಲೆ ಹೊರಡಿಸಿದೆ. ಜುಲೈ 26 ರ ಸಂಜೆ 6 ಗಂಟೆಯವರೆಗೆ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಸಾಮಾನ್ಯ ವಿದ್ಯಾರ್ಥಿಗಳಿಗೆ ಮಾತ್ರ ಈ ರಕ್ಷಣೆ ಸಿಗಲಿದೆ. ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಈ ಚಳವಳಿಯಲ್ಲಿ ಪೊಲೀಸರು ಈವರೆಗೆ 16 ಜನರನ್ನು ಬಂಧಿಸಿದ್ದರು.
ಬಿಹಾರ ಮತ್ತು ಅಸ್ಸಾಂ ರಾಜ್ಯಗಳ ಮಾದರಿ
ಈಗಾಗಲೇ ಬಿಹಾರ ಮತ್ತು ಅಸ್ಸಾಂ ರಾಜ್ಯಗಳು ಇದೇ ರೀತಿಯ ನಿರ್ಧಾರ ತಳೆದಿವೆ. ‘ಬಿಹಾರ ಬಂದ್’ ಸಮಯದಲ್ಲಿ ವಶಕ್ಕೆ ಪಡೆಯಲಾಗಿದ್ದ 694 ಜನರಲ್ಲಿ 339 ಅಪ್ರಾಪ್ತರನ್ನು ತಕ್ಷಣವೇ ಬಿಡುಗಡೆ ಮಾಡಲಾಗಿದ್ದು, ಇನ್ನುಳಿದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ. ಇನ್ನೊಂದೆಡೆ, ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರವು ಬಂಧಿತ 13 ವ್ಯಕ್ತಿಗಳ ಮೇಲಿನ 5 ಪ್ರಕರಣಗಳನ್ನು ರದ್ದುಗೊಳಿಸಲು ತೀರ್ಮಾನಿಸಿದೆ.



