ಔರಾದ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಬೃಹತ್ ರೋಡ್ ಶೋ: ಯಾತ್ರೆಯಲ್ಲಿ ಹೆಚ್ಚು ಜನ ಸೇರಲು ಸಚಿವ ಚವ್ಹಾಣ್ ಕರೆ

ಹೊಸದಿಗಂತ ವರದಿ, ಬೀದರ್

ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಮಾರ್ಚ್ 4ರಂದು ಔರಾದ್ ಕ್ಷೇತ್ರದಲ್ಲಿ ನಡೆಯಲಿರುವ ಬೃಹತ್ ರೋಡ್ ಶೋ ಕಾರ್ಯಕ್ರಮದ ಪೂರ್ವ ತಯಾರಿ ಕುರಿತಂತೆ ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ್ ಅವರು ಮಾರ್ಚ್ 2ರಂದು ಔರಾದನಲ್ಲಿ ಪಕ್ಷದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿದರು.

ಸಭೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಔರಾದ ವಿಧಾನಸಭಾ ಕ್ಷೇತ್ರದ ಎಲ್ಲಾ ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರಗಳಲ್ಲಿ ಮಾಡಿಕೊಂಡಿರುವ ತಯಾರಿಗಳ ಬಗ್ಗೆ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರಿಂದ ವಿವರಣೆ ಪಡೆದರು. ಈ ವೇಳೆ ಪಕ್ಷದ ಮುಖಂಡರು ಕಾರ್ಯಕ್ರಮಕ್ಕಾಗಿ ಈವರೆಗೆ ಮಾಡಿಕೊಂಡಿರುವ ಪೂರ್ವ ಸಿದ್ಧತೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದ್ದು, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವರಾದ ಶ್ರೀರಾಮುಲು, ಹಾಲಪ್ಪ ಆಚಾರ್, ಆನಂದ ಸಿಂಗ್, ಅರವಿಂದ ಲಿಂಬಾವಳಿ, ರಘುನಾಥರಾವ್ ಮಲ್ಕಾಪೂರೆ, ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ಶರಣು ಸಲಗರ್ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು ಒಳಗೊಂಡು ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಔರಾದ ಕ್ಷೇತ್ರದಲ್ಲಿ ವಡಗಾಂವ, ಸಂತಪೂರ ಹಾಗೂ ಔರಾದ ಪಟ್ಟಣದಲ್ಲಿ ರೋಡ್ ಶೋ ನಡೆದ ನಂತರ ಗಣ್ಯರು ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವರು. ಬಳಿಮ ಯಾತ್ರೆ ಮುಂದೆ ಸಾಗಲಿದೆ ಎಂದರು.

ಯಾತ್ರೆ ಸಾಗುವ ಎಲ್ಲ ಕಡೆಗಳಲ್ಲಿ ಪಕ್ಷದ ಧ್ವಜಗಳು ರಾರಾಜಿಸಬೇಕು. ಎಲ್ಲೆಡೆಯು ಸರಿಯಾಗಿ ಸಿಂಗರಿಸಬೇಕು. ರೋಡ್ ಶೋನಲ್ಲಿ ಕನಿಷ್ಠ 20 ಸಾವಿರಕ್ಕಿಂತ ಹೆಚ್ಚು ಜನರನ್ನು ಸೇರಬೇಕು. ಕಾರ್ಯಕ್ರಮದಲ್ಲಿ ಎಲ್ಲೆಲ್ಲೂ ಜನಜಂಗುಳಿ ಕಾಣುವ ರೀತಿಯಲ್ಲಿ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬೇಕು. ಕಾರ್ಯಕ್ರಮದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮಾಜಿ ಶಾಸಕರಾದ ಅಮರನಾಥ ಪಾಟೀಲ, ಚುನಾವಣಾ ಪ್ರಭಾರಿ ವೀರಣ್ಣಾ ಕಾರಬಾರಿ, ಯಾತ್ರೆಯ ಸಂಚಾಲಕರಾದ ವಸಂತ ವಕೀಲ್, ಸುರೇಶ ಭೋಸ್ಲೆ, ಮುಖಂಡರಾದ ಶರಣಪ್ಪಾ ಪಂಚಾಕ್ಷರಿ, ದೋಂಡಿಬಾ ನರೋಟೆ, ಗರೀಶ ವಡೆಯರ್, ಖಂಡೋಬಾ ಕಂಗಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಳಿಕ ಸಂತಪೂರ ಹಾಗೂ ವಡಗಾಂವನಲ್ಲಿ ಪಕ್ಷದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!