ಪಾಕಿಸ್ತಾನಕ್ಕೆ ಬಿಗ್‌ ಶಾಕ್-‌ ನ್ಯಾಟೋ ಅಲ್ಲದ ಮಿತ್ರಕೂಟದಿಂದ ಹೊರಹಾಕಲು ಅಮೆರಿಕನ್‌ ಕಾಂಗ್ರೆಸ್‌ ನಲ್ಲಿ ಮಸೂದೆ ಮಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಂದೆಡೆ ಮಿತಿ ಮೀರಿದ ಭಯೋತ್ಪಾದನೆಯಿಂದ ತತ್ತರಿಸುತ್ತ,ಇನ್ನೊಂದೆಡೆ ಆರ್ಥಿಕತೆ ಕುಸಿದು ಭಿಕ್ಷೆಬೇಡುವ ಸ್ಥಿತಿಗೆ ತಲುಪಿದೆ ಪಾಕಿಸ್ತಾನ. ದುಸ್ಥಿತಿಯಲ್ಲಿರುವ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಆಘಾತ ಉಂಟಾಗಿದ್ದು ನ್ಯಾಟೋ ಅಲ್ಲದ ಪ್ರಮುಖ ಮಿತ್ರಕೂಟದಿಂದ ಪಾಕಿಸ್ತಾನವನ್ನು ಕೈ ಬಿಡುವ ಮಸೂದೆಯು ಅಮೆರಿಕದ ಕಾಂಗ್ರೆಸ್ಸಿನಲ್ಲಿ ಮಂಡನೆಯಾಗಿದೆ.

ಅಮೆರಿಕದ ನ್ಯಾಟೋ ಅಲ್ಲದ ಪ್ರಮುಖ ಮಿತ್ರಕೂಟದ ಪಟ್ಟಿಯಲ್ಲಿ ಪಾಕಿಸ್ತಾನ ಇಲ್ಲಿಯವರೆಗೂ ಸ್ಥಾನ ಪಡೆದುಕೊಂಡಿತ್ತು. ಇದರಿಂದಾಗಿ ಅಮೆರಿಕದಿಂದ ಹೆಚ್ಚುವರಿ ರಕ್ಷಣಾ ಸರಬರಾಜುಗಳು, ರಕ್ಷಣಾ ಸಾಮಗ್ರಿಗಳಿಗಾಗಿ ಹೆಚ್ಚಿನ ಸಾಲಕ್ಕೆ ಅರ್ಹತೆ, ರಕ್ಷಣಾ ಸಾಮಗ್ರಿಗಳ ಅಭಿವೃದ್ಧಿ ಮತ್ತು ಪರೀಕ್ಷೆ, ಹಣಕಾಸಿನ ಸಹಾಯ ಇತ್ಯಾದಿ ಸವಲತ್ತುಗಳು ಪಾಕಿಸ್ತಾನಕ್ಕೆ ಲಭ್ಯವಾಗುತ್ತಿತ್ತು. ಆದರೆ ಈ ಪದನಾಮವನ್ನು ಪಾಕಿಸ್ತಾನ ಕಳೆದುಕೊಂಡರೆ ಈ ಸವಲತ್ತುಗಳು ಕೊನೆಗೊಳ್ಳಲಿವೆ.

ಪ್ರಸ್ತುತ ಅಮೆರಿಕದ ನ್ಯಾಟೋ ಅಲ್ಲದ ಪ್ರಮುಖ ಮಿತ್ರಕೂಟದಿಂದ ಪಾಕಿಸ್ತಾನವನ್ನು ಹೊರಹಾಕುವ ಮಸೂದೆಯನ್ನು ಅಮೆರಿಕದ ಕಾಂಗ್ರೆಸ್‌ನಲ್ಲಿ ಮಂಡಿಸಲಾಗಿದ್ದು ಕಾಂಗ್ರೆಸ್‌ ಸದಸ್ಯ ಆಂಡಿ ಬಿಗ್ಸ್‌ ಇದನ್ನು ಮಂಡಿಸಿದ್ದಾರೆ. ಇದನ್ನು ಕಾನೂನಾಗಿ ಜಾರಿ ಮಾಡುವ ಮೊದಲು ಅಮೆರಿಕದ ಹೌಸ್‌ ಮತ್ತು ಸೆನೆಟ್‌ ಈ ಮಸೂದೆಯನ್ನು ಅಂಗೀಕರಿಸಬೇಕಾಗುತ್ತದೆ. ಅಗತ್ಯ ಕ್ರಮಗಳಿಗಾಗಿ ಮಸೂದೆಯನ್ನು ವಿದೇಶಾಂಗ ವ್ಯವಹಾರಗಳ ಸಮಿತಿಗೆ ಕಳುಹಿಸಲಾಗಿದೆ.

ಇದಲ್ಲದೇ, ಇತ್ತೀಚೆಗಷ್ಟೇ ಕಪ್ಪುಪಟ್ಟಿ ಸೇರಿರುವ ಭಯೋತ್ಪಾದಕ ಹಕ್ಕಾನಿ ಹಾಗು ಆತನ ಉಗ್ರ ನೆಟ್‌ವರ್ಕ್‌ ಗಳನ್ನು ಮಟ್ಟಹಾಕಲು ಪಾಕಿಸ್ತಾನ ಯಾವ ಕ್ರಮಗಳನ್ನು ಕೈಗೊಂಡಿದೆ? ಭಯೋತ್ಪಾದಕ ಹಕ್ಕಾನಿ ಪಾಕಿಸ್ತಾನವನ್ನು ಸುರಕ್ಷಿತ ಅಡಗುತಾಣವನ್ನಾಗಿ ಬಳಸಿಕೊಳ್ಳುವುದನ್ನು ತಡೆಗಟ್ಟಲು ಪಾಕಿಸ್ತಾನ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಯಾವೆಲ್ಲ ಕ್ರಮ ಕೈಗೊಂಡಿದೆ ಎಂಬುದಕ್ಕೆ ವಿವರಣೆ ನೀಡುವಂತೆ ಈ ಮಸೂದೆಯು ಯುಎಸ್‌ ಅಧ್ಯಕ್ಷರನ್ನು ಕೇಳಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!