ರಸ್ತೆಮಧ್ಯೆ ನಿಲ್ಲಬೇಕಾಗಿ ಬಂದ ಪ್ರಧಾನಿ ಪ್ರಯಾಣ ವಾಹನ, ಪಂಜಾಬಿನಲ್ಲಿ ಅತಿದೊಡ್ಡ ಭದ್ರತಾ ಲೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬಿನ ಉನ್ನತ ಪೊಲೀಸ್ ಅಧಿಕಾರಿಗಳ ದುರ್ವರ್ತನೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದಲ್ಲಿ ಗಂಭೀರ ಭದ್ರತಾ ಲೋಪವಾಗಿರುವುದರ ಬಗ್ಗೆ ಗೃಹ ಸಚಿವಾಲಯ ಹೇಳಿಕೆ ನೀಡಿದೆ. ಇಂಥ ಗಂಭೀರ ಭದ್ರತಾ ಲೋಪಕ್ಕೆ ಅದು ರಾಜ್ಯಕ್ಕೆ ಕಾರಣವನ್ನೂ ಕೇಳಿದೆ.

ಆಗಿದ್ದೇನು?

ಭಾನುವಾರ ಬೆಳಗ್ಗೆ ಪ್ರಧಾನಿಯವರು ಭಟಿಂಡಾದಲ್ಲಿ ಇಳಿದರು. ನಂತರ ಅವರು ಹಸೈನಿವಾಲಾದ ರಾಷ್ಟ್ರೀಯ ಹುತಾತ್ಮ ಸ್ಮಾರಕಕ್ಕೆ ಹೋಗಬೇಕಿತ್ತು. ಮಳೆ ಮತ್ತು ವಿಷಮ ವಾತಾವರಣದಿಂದಾಗಿ ಪ್ರಧಾನಿ 20 ನಿಮಿಷ ಕಾಯಬೇಕಾಯಿತು. ಅಷ್ಟಾಗಿಯೂ ವಾತಾವರಣ ಸುಧಾರಿಸದಿದ್ದಾಗ ಎರಡು ತಾಸುಗಳ ರಸ್ತೆ ಮಾರ್ಗದ ಪ್ರಯಾಣವನ್ನು ಯೋಜಿಸಿ, ಈ ಬಗ್ಗೆ ಪಂಜಾಬಿನ ಡಿಜಿಪಿಗೆ ಮುಂಚಿತವಾಗಿ ಭದ್ರತಾ ಏರ್ಪಾಡು ಮಾಡುವುದಕ್ಕೆ ತಿಳಿಸಲಾಯಿತು.
ಆದರೆ ಮಾರ್ಗದಲ್ಲಿ ಮೇಲ್ಸೇತುವೆಯ ಬಳಿ ಪ್ರಧಾನಿಯವರ ವಾಹನ ತೆರಳಿದಾಗ ಅಲ್ಲಿ ರಸ್ತೆಗೆ ಅಡ್ಡಲಾಗಿ ಪ್ರತಿಭಟನೆ ನಡೆಯುತ್ತಿತ್ತು. ಸುಮಾರು 15-20 ನಿಮಿಷಗಳ ಕಾಲ ಪ್ರಧಾನಿ ಪ್ರಯಾಣದ ವಾಹನಗಳು ರಸ್ತೆ ಮಧ್ಯೆ ನಿಲ್ಲಬೇಕಾಗಿ ಬಂದಿದ್ದು, ಇದು ಅತಿದೊಡ್ಡ ಭದ್ರತಾ ಲೋಪವಾಗಿದೆ.

ಗೃಹ ಸಚಿವಾಲಯವು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಸರ್ಕಾರವು ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸಹ ಟ್ವೀಟ್ ಮಾಡಿ, ಇದು ಪಂಜಾಬಿನ ಕಾಂಗ್ರೆಸ್ ಆಡಳಿತದ ಅತ್ಯಂತ ಕ್ಷುಲ್ಲಕ ರಾಜಕೀಯ ಎಂದು ಕಿಡಿಕಾರಿದ್ದಾರೆ. ಈ ಪರಿಸ್ಥಿತಿಯ ಶಮನಕ್ಕೆ ಟೆಲಿಫೋನ್ ಸಂಪರ್ಕಕ್ಕೆ ಬರುವುದಕ್ಕೂ ನಿರಾಕರಿಸಿ ಪಂಜಾಬಿನ ಮುಖ್ಯಮಂತ್ರಿ ಚನ್ನಿ ಹೀನ ರಾಜಕಾರಣ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!