ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ ಮಹಿಳೆಯರನ್ನು ಕೂಡಿ ಹಾಕಿ ನಡೆಸಿದ್ರು ಕಾರ್ಯಕ್ರಮ!

ಹೊಸದಿಗಂತ ವರದಿ, ರಾಯಚೂರು:

ರಾಯಚೂರು ತಾಲೂಕಿನ ದೇವಸಗೂರು ಗ್ರಾಮದಲ್ಲಿ ಜರುಗಿದ ಗೃಹಲಕ್ಷ್ಮಿ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯರನ್ನು ಸ್ವತಃ ಉಪನಿರ್ದೇಶಕರೇ ಸಭಾ ಭವನದಿಂದ ಹೊರಹೋಗದಂತೆ ತಡೆದು ಕುಳಿತುಕೊಳ್ಳುವಂತೆ ತಾಕೀತು ಮಾಡುತ್ತಿದ್ದುದರಿಂದ ಭವನದಿಂದ ಹೊರ ಹೋಗುವುದಕ್ಕೆ ಪರದಾಡಿದ ಮಹಿಳೆಯರು.

ದೇವಸಗೂರು ಗ್ರಾಮದ ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಎರಡು ಸಾವಿರಕ್ಕೂ ಅಧಿಕ ಮಹಿಳೆಯರನ್ನು ಕರೆಸಲಾಗಿತ್ತು. ಮೈಸೂರಿನಲ್ಲಿ ಜರುಗಿದ ಮುಖ್ಯ ಕಾರ್ಯಕ್ರಮ ಸ್ವಲ್ಪ ವಿಳಂಬವಾಗಿದ್ದರಿಂದ ಶಾಸಕ ಬಸನಗೌಡ ದದ್ದಲ್ ಸೇರಿದಂತೆ ಕೆಲವರು ಮಾತನಾಡಿದರು.

ನಂತರದಲ್ಲಿ ಮೈಸೂರಿನ ಕಾರ್ಯಕ್ರಮ ಉದ್ಘಾಟನೆ ಆಗಿ ಡಿಸಿಎಂ ಡಿ.ಕೆ.ಶಿವಕುಮಾರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಮಾತನಾಡಿದ ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯರ ಸಹನೆ ಕಟ್ಟೆ ಒಡೆದಿದ್ದರಿಂದ ಒಬ್ಬಬ್ಬರಾಗಿ ಭವನದಿಂದ ಹೊರ ಹೋಗಲಾರಂಭಿಸಿದರು. ಭವನದಲ್ಲಿನ ಕುರ್ಚಿಗಳು ಖಾಲಿ ಆಗಲಾರಂಭಿಸಿದ್ದನ್ನು ಗಮನಿಸಿದ ಅಂಗನವಾಡಿ ಟೀಚರುಗಳು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಹಿಳೆಯರನ್ನು ಕಾರ್ಯಕ್ರಮ ಮುಕ್ತಾಯದವರೆಗೂ ಕುಳ್ಳರಿಸುವುದಕ್ಕೆ ಸತಾಯಗತಾಯ ಪ್ರಯತ್ನಿಸುತ್ತಿರುವುದು ಕಂಡುಬಂದಿತು.

ಮೈಸೂರಿಂದ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ವೀಕ್ಷಿಸುವ ವ್ಯವಧಾನ ಆಗಮಿಸಿದ ಮಹಿಳೆಯರಲ್ಲಿ ಇರಲಿಲ್ಲ. ಅವರಿಗೆಲ್ಲ ಉದರಕ್ಕೆ ಅನ್ನವನ್ನು ಹಾಕಿಕೊಳ್ಳುವ ಲಕ್ಷ ಮಾತ್ರ ಇತ್ತು. ಆದರೆ ಅಧಿಕಾರಿಗಳು ಇತರೆ ಸಿಬ್ಬಂಧಿಗಳು ಮಾತ್ರ ಒತ್ತಾಯಪೂರ್ವಕವಾಗಿ ಸಭಾ ಭವನದ ಎಲ್ಲ ಬಾಗಿಲುಗಳನ್ನು ಮುಚ್ಚಿ ಮಹಿಳೆಯರನ್ನು ಕೂಡಿ ಹಾಕುವ ಕೆಲಸವನ್ನು ಮಾಡಿದ್ದು ಕಂಡುಬಂದಿತು .

ಸ್ವತಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚೇತನಕುಮಾರ ಭವನದ ಬಾಗಿಲಲ್ಲಿ ನಿಂತುಕೊಂಡು ಮಹುಳೆಯರನ್ನು ಹೊರಹೋಗದಂತೆ ತಡೆಯುತ್ತಿದ್ದರು. ಊಟ ಮಾಡಿ ಹೋಗುತ್ತಿದ್ದ ಮಹಿಳೆಯರನ್ನು ಕರೆತಂದು ಭವನದಲ್ಲಿ ಕುರ್ಚಿಯಲ್ಲಿ ಕೂಡುವಂತೆ ಅವಾಜ್ ಮಾಡುತ್ತಿದ್ದರು. ಇವರೊಂದಿಗೆ ಇಲಾಖೆಯ ಸಿಬ್ಬಂಧಿಗಳೂ ಸಹ ಮಹಿಳೆಯರನ್ನು ಕರೆತರುತ್ತಿರುವುದು ಕಂಡುಬಂದಿತು. ಎಷ್ಟೇ ಪ್ರಯತ್ನಿಸಿದರು ಸಂವಾದ ಕಾರ್ಯಕ್ರಮದ ಹೊತ್ತಿಗೆ ಸಭಾ ಭವನ ಖಾಲಿ ಖಾಲಿ ಆಗಿದ್ದರಿಂದ ಸಂವಾದ ಕಾರ್ಯಕ್ರಮ ಜರುಗಲೇ ಇಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!