ಹೊಸದಿಗಂತ ವರದಿ,ಅಂಕೋಲಾ:
ಬೈಕ್ ನಿಯಂತ್ರಣ ತಪ್ಪಿ ದಿವೈಡರ್ ಗೆ ಬಡಿದು ವಿದ್ಯುತ್ ಕಂಬಕ್ಕೆ ಗುದ್ದಿದ ಕಾರಣ ಬೈಕ್ ಸವಾರ ಮತ್ತು ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಕಾರವಾರ ರಸ್ತೆ ವಾಜಂತ್ರಿ ಕಟ್ಟೆ ಕ್ರಾಸ್ ಬಳಿ ಸಂಭವಿಸಿದೆ.
ಗಾಯಾಳನ್ನು ಹಿಲ್ಲೂರು ಹೊಸಕಂಬಿ ನಿವಾಸಿ ವಿಶ್ವನಾಥ ಹನುಮಂತ ಆಗೇರ (19) ಮತ್ತು ಬಂಕಿಕೊಡ್ಲ ನಿವಾಸಿ ವಿಕಾಸ ಆಗೇರ ಎಂದು ಗುರುತಿಸಲಾಗಿದ್ದು ಪೇಂಟಿಂಗ್ ಕೆಲಸ ಮಾಡುವ ಕೂಲಿ ಕಾರ್ಮಿಕರಾಗಿದ್ದ ಇವರು ಕೆಲಸ ಮುಗಿಸಿ ಮರಳುತ್ತಿದ್ದ ಸಂದರ್ಭದಲ್ಲಿ ಅದಾವುದೋ ಕಾರಣದಿಂದ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬಡಿದು ಮಧ್ಯದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಇಬ್ಬರ ತಲೆ ಮತ್ತು ಕೈ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಇಬ್ಬರೂ ಪ್ರಜ್ಞಾಹೀನರಾಗಿದ್ದಾರೆ.
ಸಂಚಾರಿ ಪಿ.ಎಸ್. ಐ ಸುನೀಲ ಹುಲ್ಗೊಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗಾಯಾಳುಗಳನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.