ಹೊಸ ದಿಗಂತ ವರದಿ, ಕಾರವಾರ:
ಕ್ಯಾಂಟರ್ ಲಾರಿ ಬೈಕಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಹರಿದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಕಾರವಾರ ತಾಲೂಕಿನ ಬೈತಕೋಲ ಘಟ್ಟ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ಬೈಕ್ ಸವಾರ ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲಿಗದ್ದೆ ಶಿರಗುಂಜಿ ನಿವಾಸಿ ಜೀತೇಂದ್ರ ಅನಂತ ಗೌಡ(24) ಮೃತ ವ್ಯಕ್ತಿಯಾಗಿದ್ದು ಕಾರವಾರ ಕಡೆಯಿಂದ ಅಂಕೋಲಾ ಕಡೆ ಹೋಗುತ್ತಿದ್ದ ಕೆ.ಎ51 ಎ.ಎ 9310 ನೋಂದಣಿ ಸಂಖ್ಯೆಯ ಕ್ಯಾಂಟರ್ ವಾಹನ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಬೈತಕೋಲ ಘಟ್ಟದ ನೀರಿನ ಟ್ಯಾಂಕ್ ಬಳಿ ಅಂಕೋಲಾ ಕಡೆಯಿಂದ ಕಾರವಾರ ಕಡೆ ಬರುತ್ತಿದ್ದ ಕೆ.ಎ 30 ಎಕ್ಸ್ 0760 ನೋಂದಣಿ ಸಂಖ್ಯೆಯ ಬೈಕಿಗೆ ಮುಂದಿನ ಬಲಬದಿಯಿಂದ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆ ಮೇಲೆ ಬಿದ್ದ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಅಂಕೋಲಾ ಕಡೆಯಿಂದ ಕಾರವಾರ ಕಡೆ ಅತಿ ವೇಗದಲ್ಲಿ ಬರುತ್ತಿದ್ದ ಎ.ಆರ್ 01 ಟಿ 8977 ನೋಂದಣಿ ಸಂಖ್ಯೆಯ ಬಸ್ ವೇಗ ನಿಯಂತ್ರಿಸಲು ಸಾಧ್ಯವಾಗದೇ ಅಪಘಾತದಲ್ಲಿ ರಸ್ತೆ ಮೇಲೆ ಬಿದ್ದ ಜೀತೇಂದ್ರ ಗೌಡ ಅವರ ಮೇಲೆ ಹರಿದಿದ್ದು ತಲೆ ಮತ್ತು ಅಂಗಾಂಗಗಳಿಗೆ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.