ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ.
ಭೇಟಿಯ ಸಮಯ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಸುಸ್ಥಿರತೆ ಮತ್ತು ಭವಿಷ್ಯದ ಅಭಿವೃದ್ಧಿಯ ಕುರಿತು ವ್ಯಾಪಕ ಚರ್ಚೆ ನಡೆಸಿದರು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಬಿಲ್ ಗೇಟ್ಸ್, “ಭಾರತದ ಅಭಿವೃದ್ಧಿ, ವಿಕಸಿತ್ ಭಾರತ್ @ 2047ರ ಹಾದಿ ಮತ್ತು ಆರೋಗ್ಯ, ಕೃಷಿ, ಎಐ ಹಾಗೂ ಇಂದು ಪ್ರಭಾವ ಬೀರುತ್ತಿರುವ ಇತರ ವಲಯಗಳಲ್ಲಿನ ಅತ್ಯಾಕರ್ಷಕ ಪ್ರಗತಿಗಳ ಬಗ್ಗೆ ನರೇಂದ್ರ ಮೋದಿ ಅವರೊಂದಿಗೆ ನಾನು ಉತ್ತಮ ಚರ್ಚೆ ನಡೆಸಿದೆ’ ಎಂದು ಹೇಳಿದ್ದಾರೆ.
ಧಾನಿ ಮೋದಿ ಕೂಡ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ‘ಬಿಲ್ ಗೇಟ್ಸ್ ಜೊತೆಗಿನ ನಮ್ಮ ಸಭೆ ಬಹಳ ಅತ್ಯುತ್ತಮವಾಗಿತ್ತು. ಮುಂಬರುವ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ, ನಾವೀನ್ಯತೆ ಮತ್ತು ಸುಸ್ಥಿರತೆ ಸೇರಿದಂತೆ ವೈವಿಧ್ಯಮಯ ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ’ ಎಂದು ಹೇಳಿದರು.
ಬಿಲ್ ಗೇಟ್ಸ್ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರನ್ನು ಕೂಡ ಭೇಟಿ ಮಾಡಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವಲ್ಲಿ ಭಾರತ ಸರ್ಕಾರ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ನಡುವಿನ ಸಹಯೋಗವನ್ನು ಪರಿಶೀಲಿಸಿದ್ದಾರೆ.
ಎಲ್ಲಾ ನಾಗರಿಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳಲು ನಮ್ಮ ಹಂಚಿಕೆಯ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಲು, ನಮ್ಮ ಸಹಕಾರದ ಜ್ಞಾಪಕ ಪತ್ರವನ್ನು ನವೀಕರಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಜೆ.ಪಿ. ನಡ್ಡಾ ಹೇಳಿದರು.
ಬಳಿಕ, ಬಿಲ್ ಗೇಟ್ಸ್ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೊಂದಿಗೆ ಕೂಡ ಚರ್ಚೆ ನಡೆಸಿದರು. ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಉದ್ಯೋಗದಲ್ಲಿ ಸೇವೆಗಳ ವಿತರಣೆಯನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ (AI) ಮತ್ತು ಮುನ್ಸೂಚಕ ವಿಶ್ಲೇಷಣೆಯ ಬಳಕೆಯ ಮೇಲೆ ಕೇಂದ್ರೀಕರಿಸಿದರು.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಚಂದ್ರಬಾಬು ನಾಯ್ಡು, ಸ್ವರ್ಣ ಆಂಧ್ರಪ್ರದೇಶ 2047ರ ರಾಜ್ಯದ ದೀರ್ಘಕಾಲೀನ ಅಭಿವೃದ್ಧಿ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಬಿಲ್ ಗೇಟ್ಸ್ ಫೌಂಡೇಶನ್ ನೀಡಿದ ಬೆಂಬಲವನ್ನು ಶ್ಲಾಘಿಸಿದ್ದಾರೆ.