ʻಭಾರತದ ವಾರೆನ್ ಬಫೆಟ್ʼ ಖ್ಯಾತಿಯ ರಾಕೇಶ್‌ ಜುಂಜುನ್‌ವಾಲಾ ಇನ್ನಿಲ್ಲ: ಇಲ್ಲಿದೆ ಅವರ ಯಶಸ್ಸಿನ ವಿವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖ್ಯಾತ ಉದ್ಯಮಿ ಮತ್ತು ದೇಶೀಯ ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಕೊನೆಯುಸಿರೆಳೆದಿದ್ದಾರೆ. ಭಾನುವಾರ ಬೆಳಗ್ಗೆ ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಹೃದಯಾಘಾತಕ್ಕೊಳಗಾದ ಜುಂಜುನ್‌ವಾಲಾ ಅವರನ್ನು ಕುಟುಂಬ ಸದಸ್ಯರು ಬೆಳಿಗ್ಗೆ 06.45 ಕ್ಕೆ ಸ್ಥಳೀಯ ಕ್ಯಾಂಡಿ ಬ್ರೀಚ್ ಆಸ್ಪತ್ರೆಗೆ ಕರೆದೊಯ್ದರು ಅದರೆ, ಅಷ್ಟರಲ್ಲಾಗಲೇ ಜುಂಜುನ್‌ವಾಲಾ ಸಾವನ್ನಪ್ಪಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮೂತ್ರಪಿಂಡದ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕೆಲ ವಾರಗಳ ಹಿಂದಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು ಎನ್ನಲಾಗಿದೆ.

ಜುಂಜನ್‌ವಾಲಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಘಾತ ವ್ಯಕ್ತಪಡಿಸಿದ್ದಾರೆ. “ರಾಕೇಶ್ ಜುಂಜುನ್‌ವಾಲಾ ಅವರು ಅದಮ್ಯರಾಗಿದ್ದವರು. ಜೀವನೋತ್ಸಾಹ, ಅವರ ತಮಾಷೆ ವ್ಯಕ್ತಿತ್ವ ಹಾಗೂ ಒಳನೋಟವುಳ್ಳ ವ್ಯಕ್ತಿ. ಅವರು ಆರ್ಥಿಕ ಜಗತ್ತಿಗೆ ಅಳಿಸಲಾಗದ ಕೊಡುಗೆಯನ್ನು ಬಿಟ್ಟು ಹೋಗಿದ್ದಾರೆ. ಭಾರತದ ಪ್ರಗತಿ ಬಗ್ಗೆ ಬಹಳ ಉತ್ಸುಕರಾಗಿದ್ದರು. ಅವರ ಅಗಲಿಕೆ ದುಃಖ ತಂದಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಓಂ ಶಾಂತಿ” ಎಂದು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ಜುಂಜುನ್‌ವಾಲಾ ಅವರನ್ನು “ಭಾರತದ ವಾರೆನ್ ಬಫೆಟ್” ಎಂದೂ ಕರೆಯಲಾಗುತ್ತದೆ. ಇತ್ತೀಚೆಗಷ್ಟೇ ಅವರ ಮಾಲೀಕತ್ವದಲ್ಲಿ ‘ಆಕಾಶ್ ಏರ್’ ವಿಮಾನಯಾನ ಕಂಪನಿ ಕಳೆದ ವಾರ ತನ್ನ ಸೇವೆಯನ್ನು ಪ್ರಾರಂಭ ಮಾಡಿತ್ತು. ಅವರ ಆಸ್ತಿ ಮೌಲ್ಯ ಸುಮಾರು  5.5 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. 1985ರಲ್ಲಿ ಐದು ಸಾವಿರ ಹೂಡಿಕೆಯೊಂದಿಗೆ ಷೇರು ಮಾರುಕಟ್ಟೆ ಪ್ರವೇಶಿಸಿ ಸಾವಿರಾರು ಕೋಟಿ ಲಾಭ ಗಳಿಸಿದರು.

ಒಬ್ಬ ವ್ಯಾಪಾರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಅವರು ಇದೀಗ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಹಂಗಾಮಾ ಮೀಡಿಯಾ ಮತ್ತು ಆಪ್ಟೆಕ್‌ನ ಅಧ್ಯಕ್ಷರಾಗಿದ್ದವರು. ಜೊತೆಗೆ ವೈಸ್‌ರಾಯ್ ಹೋಟೆಲ್‌, ಕಾನ್‌ಕಾರ್ಡ್ ಬಯೋಟೆಕ್, ಪ್ರೊವೊಗ್ ಇಂಡಿಯಾ ಮತ್ತು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ 1960ರ ಜುಲೈ 5ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರು, ಕಾಲೇಜು ಓದುವಾಗಲೇ ಸ್ಟಾಕ್ ಮಾರ್ಕೆಟ್‌ನಲ್ಲಿ ಡಬ್ಲಿಂಗ್ ಮಾಡಲು ಪ್ರಾರಂಭಿಸಿದರು. ಬಳಿಕ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ಸೇರಿಕೊಂಡರು. 1985 ರಲ್ಲಿ ಮೊದಲ ಬಾರಿಗೆ 5,000 ರೂ. ಬಂಡವಾಳವನ್ನು ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರು. ಆ ಬಂಡವಾಳ ಸೆಪ್ಟೆಂಬರ್ 2018 ರ ವೇಳೆಗೆ 11,000 ಕೋಟಿ ರೂಗೆ ತಲುಪಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!