ಯಾವುದೇ ಕಾರಣಕ್ಕೂ ಕಾಂಗ್ರೆಸ್​ಗೆ ಅಧಿಕಾರಕ್ಕೆ ಬರಲು ಬಿಡಲ್ಲ: ಯಡಿಯೂರಪ್ಪ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಯಾವುದೇ ಕಾರಣಕ್ಕೂ ಕಾಂಗ್ರೆಸ್​ಗೆ ಅಧಿಕಾರಕ್ಕೆ ಬರಲು ಬಿಡಲ್ಲ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಮತ್ತು 11 ಸದಸ್ಯರನ್ನೊಳಗೊಂಡ ಕೇಂದ್ರ ಬಿಜೆಪಿ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೂ ಮಹತ್ತರ ಸ್ಥಾನ ನೀಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಈ ಬೆನ್ನಲ್ಲೇ ಮಾತನಾಡಿದ ಅವರು, ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಅವಕಾಶ ಕಲ್ಪಿಸಿದ ಹೈಕಮಾಂಡ್ ನಿರ್ಧಾರವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಜೊತೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಕ್ಷ ಬಲಪಡಿಸಲು ಶಕ್ತಿಮೀರಿ ಪ್ರಯತ್ನ ನಡೆಸುತ್ತೇನೆ, ಹೈಕಮಾಂಡ್ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಹೈಕಮಾಂಡ್ ನಾಯಕರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಯಾವುದೇ ಸ್ಥಾನಮಾನ ಅಪೇಕ್ಷೆ ಪಡುವ ವ್ಯಕ್ತಿ ನಾನಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ನನ್ನದೊಂದು ಆಸೆ ಇತ್ತು. ಆ ಬಗ್ಗೆ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೆ. ಅವರು ದಕ್ಷಿಣ ಭಾರತ ಕಡೆ ಗಮನ ಕೊಡಬೇಕು ಎಂದಿದ್ದರು. ಅದರಂತೆ ಈಗ ಅವರು ನೀಡಿರುವ ಜವಾಬ್ದಾರಿಯನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸಿ ರಾಜ್ಯದ ಉದ್ದಗಲಕ್ಕೆ ಓಡಾಡಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಮತ್ತು ದಕ್ಷಿಣ ಭಾರತದ ಹಲವು ಕಡೆ ಪ್ರವಾಸ ಮಾಡಿ ಅಲ್ಲಿಯೂ ಪಕ್ಷ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿಯು ಕಾರ್ಯಕರ್ತರನ್ನು ಕೈಬಿಡಲ್ಲ ಎನ್ನುವುದಕ್ಕೆ ನನ್ನದೇ ಉದಾಹರಣೆ. ಯಾವ ಕಾರಣಕ್ಕೂ ಬೇರೆ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಡಲ್ಲ. ರಾಜ್ಯ ಪ್ರವಾಸ ಮಾಡಿ ಸ್ಪಷ್ಟ ಬಹುಮತ ಬರಲು ಸಾಮೂಹಿಕ ನಾಯಕತ್ವದಲ್ಲಿ ನಾವೆಲ್ಲಾ ಒಟ್ಟಾಗಿ ಪ್ರವಾಸ ಮಾಡಲಿದ್ದೇವೆ. ನನ್ನ ಮೇಲೆ ಹೈಕಮಾಂಡ್​​ಗೆ ವಿಶ್ವಾಸವಿದೆ. ಹಾಗಾಗಿ ಹೆಚ್ಚಿನ ಜವಾಬ್ದಾರಿ ಕೊಟ್ಟಿದ್ದಾರೆ. ಇನ್ನು ಹತ್ತು ವರ್ಷ ಪಕ್ಷ ಬಲಪಡಿಸುವ ಹೇಳಿಕೆ ನೀಡಿದ್ದೆ. ಕೈಕಾಲು ಗಟ್ಟಿ ಇರುವವರೆಗೂ ಓಡಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ದೊಡ್ಡ ಜವಾಬ್ದಾರಿ ನೀಡಿದ್ದಾರೆ, ಇದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ, ಇದರಿಂದ ಹೇಗೆ ಬದಲಾವಣೆ ಗಾಳಿ ಬೀಸಲಿದೆ ಎಂದು ನಮ್ಮ ರಾಜ್ಯ ಪ್ರವಾಸದ ವೇಳೆ ಗೊತ್ತಾಗಲಿದೆ. ಇವತ್ತಿನಿಂದ ಇತರ ಪಕ್ಷಗಳಲ್ಲಿನ ಸಿಎಂ ಹುದ್ದೆ ಪೈಪೋಟಿ ನಿಲ್ಲಲಿದೆ ಎಂದು ಡಿ ಕೆ ಶಿವಕುಮಾರ್, ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಸುದ್ದಿಗೋಷ್ಟಿ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!