ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಟಾರ್ಟಿಕಾದಲ್ಲಿ ಮೊದಲ ಬಾರಿಗೆ ಹಕ್ಕಿ ಜ್ವರ ಭೀತಿ ಎದುರಾಗಿದೆ. ಈ ಮಾರಣಾಂತಿಕ ವೈರಸ್ ಪೆಂಗ್ವಿನ್‌ಗಳು ಮತ್ತು ಇತರ ಸ್ಥಳೀಯ ಪಕ್ಷಿ ಪ್ರಭೇದಗಳಿಗೆ ಹಾನಿ ಉಂಟುಮಾಡಬಹುದು ಎಂದು ಬ್ರಿಟಿಷ್ ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇತಿಹಾಸದಲ್ಲಿ ಅತ್ಯಂತ ರೋಗಕಾರಕ ಏವಿಯನ್ ಇನ್ಫ್ಲುಯೆನ್ಸ್, ಪಕ್ಷಿಗಳ ಪ್ರಮುಖ ಸಂತಾನೋತ್ಪತ್ತಿ ಸ್ಥಳ ಅಂಟಾರ್ಕ್ಟಿಕಾವನ್ನು ತಲುಪಿರುವುದು ವಿಜ್ಞಾನಿಗಳ ಆತಂಕಕ್ಕೆ ಕಾರಣವಾಗಿದೆ.
ದಕ್ಷಿಣ ಜಾರ್ಜಿಯಾದ ಬರ್ಡ್ ಐಲ್ಯಾಂಡ್, ದಕ್ಷಿಣ ಅಮೆರಿಕಾದ ತುದಿಯ ಪೂರ್ವದ ಅಂಟಾರ್ಕ್ಟಿಕ್, ಉತ್ತರಕ್ಕೆ ಬ್ರಿಟಿಷ್ ಸಾಗರೋತ್ತರ ಪ್ರದೇಶದಲ್ಲಿ ಸಾವನ್ನಪ್ಪಿರುವ ಸಮುದ್ರ ಪಕ್ಷಿಗಳಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು, ಬ್ರಿಟನ್‌ನಲ್ಲಿ ನಡೆಸಿದ ಪರೀಕ್ಷೆಗಳು ಪಾಸಿಟಿವ್ ಬಂದಿರುವುದಾಗಿ ಯುಕೆ ಹೇಳಿದೆ.
ವಲಸೆ ಹಕ್ಕಿಗಳಲ್ಲಿ ವೈರಸ್ ಹರಡುತ್ತದೆ
ಹಕ್ಕಿಜ್ವರ ಪ್ರಕರಣಗಳು ಹೆಚ್ಚಿರುವ ದಕ್ಷಿಣ ಅಮೆರಿಕಾಕ್ಕೆ ವಲಸೆ ಬಂದ ಪಕ್ಷಿಗಳಿಂದ ಈ ವೈರಸ್ ಹೆಚ್ಚಾಗಿ ಹರಡಿದೆ ಎಂದು ಹೇಳಲಾಗುತ್ತಿದೆ. ಅಂಟಾರ್ಟಿಕಾದಲ್ಲಿ ಹಕ್ಕಿಜ್ವರ ಹರಡುತ್ತಿರುವುದು ವಿನಾಶಕಾರಿ ಸುದ್ದಿ ಎಂದು ಮೆಲ್ಬೋರ್ನ್ ವಿಶ್ವವಿದ್ಯಾಲಯದ ಪಕ್ಷಿ ಜ್ವರ ತಜ್ಞ ಮಿಚೆಲ್ ವಿಲ್ಲೆ ಹೇಳಿದ್ದಾರೆ.
ಯುಕೆ ಅನಿಮಲ್ ಅಂಡ್ ಪ್ಲಾಂಟ್ ಹೆಲ್ತ್ ಏಜೆನ್ಸಿಯ ವೈರಾಲಜಿ ಮುಖ್ಯಸ್ಥ ಇಯಾನ್ ಬ್ರೌನ್ ಪ್ರಕಾರ..ವಲಸೆ ಹಕ್ಕಿಗಳ ಕಾರಣದಿಂದ ದಕ್ಷಿಣ ಅಮೆರಿಕಾ, ಅಂಟಾರ್ಟಿಕಾ ದ್ವೀಪ ಮುಖ್ಯ ಭೂಭಾಗಕ್ಕೆ ವೈರಸ್ ಹರಡಬಹುದು ಎಂದು ಎಚ್ಚರಿಸಿದ್ದಾರೆ. ವೈರಸ್‌ಗೆ ಎಂದಿಗೂ ಒಡ್ಡಿಕೊಳ್ಳದ ಪೆಂಗ್ವಿನ್‌ಗಳಂತಹ ಪಕ್ಷಿಗಳೂ ವೈರಸ್‌ನಿಂದ ಹೆಚ್ಚು ಹಾನಿಗೊಳಗಾಗುವ ಸಾಧ್ಯತೆಯಿದೆ. ಈ ತಿಂಗಳ ಆರಂಭದಲ್ಲಿ ಕಾಂಬೋಡಿಯಾದಲ್ಲಿ ಎರಡು ವರ್ಷದ ಬಾಲಕಿ ಹಕ್ಕಿ ಜ್ವರದಿಂದ ಸಾವನ್ನಪ್ಪಿದ್ದಳು.