ಪ್ರತಿ ಗ್ರಾಮ- ಬೂತ್‍ ಗಳಲ್ಲಿ ಬಿಜೆಪಿ ಸಾಧನೆ ಪ್ರಚಾರ: ಫೆ. 24 ರಿಂದ ಪ್ರಗತಿ ರಥ ಸಂಚಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳ ಸಾಧನೆಯನ್ನು ಪ್ರತಿ ಗ್ರಾಮ ಮತ್ತು ಬೂತ್‍ಗೆ ತಲುಪಿಸುವ ಉದ್ದೇಶದಿಂದ ಪ್ರಗತಿ ರಥಗಳು ರಾಜ್ಯದಲ್ಲಿ ಸಂಚರಿಸಲಿವೆ ಎಂದು ರಾಜ್ಯ ಸಂಚಾಲಕ ಎಸ್.ವಿ. ರಾಘವೇಂದ್ರ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಗತಿ ರಥಕ್ಕಾಗಿ ಎಲ್‍ಇಡಿ ಸ್ಕ್ರೀನ್ ಇರುವ 135 ವಾಹನಗಳನ್ನು ಸಿದ್ಧಪಡಿಸಲಾಗಿದೆ. 224 ಕ್ಷೇತ್ರಗಳಲ್ಲಿ, 58 ಸಾವಿರಕ್ಕೂ ಹೆಚ್ಚು ಬೂತ್‍ಗಳಲ್ಲಿ ಪ್ರಗತಿ ರಥಗಳು ಸಂಚರಿಸಲಿವೆ. ರಥದ ಮೂಲಕ ಕಾರ್ನರ್ ಮೀಟಿಂಗ್, ಭಾಷಣ ಮಾಡಲು ಮೈಕ್, ಸ್ಪೀಕರ್, ಲೈವ್ ಸ್ಟ್ರೀಮ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ರಥಗಳನ್ನು ಗಮನಿಸಲು ಜಿಪಿಎಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಜೆಪಿ ಬ್ರ್ಯಾಂಡಿಂಗ್ ಮೂಲಕ ರಥ ಸಂಚರಿಸಲಿದೆ. ಸಲಹಾ ಪೆಟ್ಟಿಗೆಯನ್ನೂ ಈ ರಥ ಒಳಗೊಂಡಿರುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಜನರ ಸಲಹೆ ನಿರೀಕ್ಷಿಸಲಾಗಿದೆ. ಒಟ್ಟು 22.40 ಲಕ್ಷ ಸಲಹೆ ನಿರೀಕ್ಷೆ ಇದೆ. ಕ್ಯೂ ಆರ್ ಕೋಡ್ ಕೂಡ ಇದೆ ಎಂದರು.

ಸಾಧನೆಗಳ ವಿಡಿಯೋ ಪ್ರದರ್ಶನ ನಡೆಯಲಿದೆ. 33 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಳ್ಳಿ ನೀರು, ವಿದ್ಯುತ್, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ, ಕಳಸಾ ಬಂಡೂರಿಗೆ ಹಣ, ಬೆಳಗಾವಿ ಕಿತ್ತೂರು ರೈಲ್ವೆ ಕಾಮಗಾರಿ, ಬೆಂಗಳೂರು ಅಭಿವೃದ್ಧಿ ಸೇರಿ ವಿವಿಧ ಯೋಜನೆಗಳ ಕುರಿತು ತಿಳಿಸಲಿದ್ದೇವೆ. ಯುಪಿಎ ಸರಕಾರ ಕೊಟ್ಟ ಹಣಕ್ಕಿಂತ 9 ಪಟ್ಟು ಹೆಚ್ಚು ಹಣವನ್ನು ರೈಲ್ವೆಗೆ ನೀಡಿದ್ದು, ಕೊಪ್ಪಳದಲ್ಲಿ ಕುಶಲಕರ್ಮಿಗಳಿಗೆ ನೆರವು, 4 ಸಾವಿರ ಕಿಮೀ ಹೆದ್ದಾರಿಗಳ ಅಭಿವೃದ್ಧಿ ಕುರಿತಂತೆ ವಿವರಗಳು ಇರಲಿವೆ ಎಂದು ವಿವರ ನೀಡಿದರು.

ಶಿವಮೊಗ್ಗ ಸೇರಿ 8 ವಿಮಾನನಿಲ್ದಾಣ ನಿರ್ಮಾಣದಿಂದ ಆಗುವ ಪ್ರಯೋಜನ ಸೇರಿ ರಾಜ್ಯದ ಎಲ್ಲ ಭಾಗಗಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ವಿಡಿಯೋ ಮೂಲಕ ವಿವರಿಸಲಾಗುತ್ತದೆ ಎಂದು ತಿಳಿಸಿದರು. ಮೆಟ್ರೋಗೆ ನೀಡಿದ ಅನುದಾನ, ಲಂಬಾಣಿ ತಾಂಡಾಗಳ ಹಕ್ಕುಪತ್ರ ಕುರಿತು ಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಹ ಸಂಚಾಲಕರಾಗಿ ಮಂಗಳೂರಿನ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಮತ್ತು ಬೆಂಗಳೂರು ವಿಭಾಗ ಪ್ರಭಾರಿ ಗೋಪಿನಾಥ ರೆಡ್ಡಿ ಅವರು ಮಾತನಾಡಿ, ಪ್ರಗತಿ ರಥವನ್ನು ಇದೇ 24ರಂದು ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಒಂದು ರಥವು ಕನಿಷ್ಠ 15 ದಿನಗಳ ಕಾಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಓಡಾಡಲಿದೆ. ಕರಾವಳಿ ಮತ್ತಿತರ ಕಡೆ ದೂರದೂರದ ಪ್ರದೇಶಗಳನ್ನು ಭೇಟಿ ಮಾಡಲು ಪ್ರತಿ ಕ್ಷೇತ್ರಕ್ಕೆ ಒಂದು ರಥ ಇರಲಿದೆ. ಬೆಂಗಳೂರಿನಲ್ಲಿ 2 ವಿಧಾನಸಭಾ ಕ್ಷೇತ್ರಕ್ಕೆ ಒಂದು ರಥ ನೀಡಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!