September 12, 2026
Saturday, September 12, 2026
spot_img

ಗಣೇಶ ಹಬ್ಬಕ್ಕೆ ಚಿಕ್ಕಮಗಳೂರಿಗೆ ಟ್ರಿಪ್ ಪ್ಲ್ಯಾನ್ ಮಾಡಿದ್ದೀರಾ? ಹೋಗೋ ಮುನ್ನ ಈ ಸುದ್ದಿ ಓದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗೌರಿ-ಗಣೇಶ ಹಬ್ಬ ಹಾಗೂ ವಾರಾಂತ್ಯದ ರಜೆ ದಿನಗಳಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಚಿಕ್ಕಮಗಳೂರಿನತ್ತ ಮುಖ ಮಾಡುವ ಪ್ರವಾಸಿಗರಿಗೆ ಜಿಲ್ಲಾಡಳಿತ ವಿಶೇಷ ಸೂಚನೆ ನೀಡಿದೆ. ಹಬ್ಬದ ದಿನವಾದ ಸೆ.14ರಂದು ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಸೇರಿದಂತೆ ಪ್ರಸಿದ್ಧ ಗಿರಿಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸದ ಯೋಜನೆಯನ್ನು ಕೊಂಚ ಮುಂದೂಡುವಂತೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ವಿನಂತಿಸಿದ್ದಾರೆ. ಕಿರಿದಾದ ಘಾಟ್‌ ರಸ್ತೆಗಳಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ಸಂಕಷ್ಟ ಎದುರಾಗುವ ಭೀತಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಗಿರಿಭಾಗದಲ್ಲಿ ಸಕ್ಕತ್ ರಶ್ ಆಗೋದು ಯಾಕೆ?

ಚಿಕ್ಕಮಗಳೂರು ತಾಲ್ಲೂಕಿನ ಕಸಬಾ, ಆವತಿ, ಜಾಗರ, ವಸ್ತಾರೆ ಹಾಗೂ ಅಂಬಳೆ ಹೋಬಳಿ ವ್ಯಾಪ್ತಿಯ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಹಬ್ಬದ ದಿನದಂದು ಇಲ್ಲಿನ ಗಿರಿಧಾಮಗಳಿಗೆ ತೆರಳುವುದು ಹಲವು ವರ್ಷಗಳ ಸಾಂಪ್ರದಾಯಿಕ ಪದ್ಧತಿಯಾಗಿದೆ. ಸ್ಥಳೀಯ ಭಕ್ತಾದಿಗಳು ಶ್ರೀ ಮೇಲುಗದ್ದುಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಮತ್ತು ಶ್ರೀ ಗುರು ನಾರುಕಂತೆಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸುತ್ತಾರೆ. ಈ ಧಾರ್ಮಿಕ ಆಚರಣೆಯ ಕಾರಣದಿಂದಾಗಿ ಸ್ಥಳೀಯರ ವಾಹನಗಳ ಸಂಖ್ಯೆಯೇ ಹೆಚ್ಚಿರಲಿದೆ.

ಟ್ರಾಫಿಕ್, ಅಪಘಾತದ ಭೀತಿ

ಹಬ್ಬದ ರಜೆಯೆಂದು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಸೀತಾಳಯ್ಯನಗಿರಿ, ಮಾಣಿಕ್ಯಧಾರ ಹಾಗೂ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇನಾಂ ದತ್ತಪೀಠದ ಕಡೆಗೆ ಪ್ರವಾಸಿಗರ ದಂಡು ಹರಿದುಬರುವ ನಿರೀಕ್ಷೆಯಿದೆ. ಆದರೆ, ಈ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತುಂಬಾ ಕಿರಿದಾಗಿದ್ದು, ಏಕಕಾಲದಲ್ಲಿ ನೂರಾರು ವಾಹನಗಳು ಬಂದರೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ದಟ್ಟವಾಗಿದೆ. ಇದು ಪ್ರವಾಸಿಗರ ಹಾಗೂ ಭಕ್ತರ ಸುರಕ್ಷತೆಗೆ ಧಕ್ಕೆ ತರಬಹುದು ಮತ್ತು ಅಪಘಾತಗಳಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ:

ಯಾರಿಗೆಲ್ಲಾ ವಿನಾಯಿತಿ ಇದೆ?

ಜಿಲ್ಲಾಡಳಿತ ನೀಡಿರುವ ಈ ಪ್ರವಾಸ ಮುಂದೂಡಿಕೆಯ ಸಲಹೆ ಎಲ್ಲರಿಗೂ ಕಡ್ಡಾಯವಲ್ಲ. ಗಿರಿಶ್ರೇಣಿಯ ಮಾರ್ಗದಲ್ಲಿರುವ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳಲ್ಲಿ ಈಗಾಗಲೇ ಮುಂಗಡವಾಗಿ ರೂಮ್ ಬುಕ್ ಮಾಡಿಕೊಂಡಿರುವ ಪ್ರವಾಸಿಗರಿಗೆ ಅಲ್ಲಿಗೆ ತೆರಳಲು ಯಾವುದೇ ಅಡ್ಡಿಯಿರುವುದಿಲ್ಲ. ಆದರೆ, ಕೇವಲ ಒಂದು ದಿನದ ಟ್ರಿಪ್ ಹಾಕಿಕೊಂಡು ಬರುವ ಪ್ರವಾಸಿಗರು ಟ್ರಾಫಿಕ್ ಕಿರಿಕಿರಿ ತಪ್ಪಿಸಲು ತಮ್ಮ ಪ್ರವಾಸದ ದಿನಾಂಕವನ್ನು ಬದಲಾಯಿಸಿಕೊಳ್ಳುವುದು ಸೂಕ್ತ ಎಂದು ಜಿಲ್ಲಾಡಳಿತ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !