ನನ್ನ ವಿರುದ್ಧದ ಪಿತೂರಿಯ ಟೂಲ್ ಕಿಟ್ ರೂಪಿಸಿದ ಬಿಜೆಪಿ: ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪ್ರತ್ಯಾರೋಪಗಳ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ (BJP) ನಾಯಕರು ಸರ್ಕಾರದ ಮೇಲೆ ಉರಿದುರಿದು ಬೀಳುತ್ತಿದ್ದಾರೆ. ಈ ಮಧ್ಯೆ ಬಿಜೆಪಿಗೆ ಅಸ್ತಿತ್ವ ಉಳಿಸಿಕೊಳ್ಳಲು ಈಗ ನನ್ನ ಹೆಸರು ಅನಿವಾರ್ಯವಾಗಿದೆ, ಹಾಗಾಗಿ ನನ್ನ ವಿರುದ್ಧದ ಪಿತೂರಿಯ “ಟೂಲ್ ಕಿಟ್“ ರೂಪಿಸಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಂದೆ ಬಿಜೆಪಿ vs ಕೆಜೆಪಿ ಬಡಿದಾಟವಿತ್ತು. ಈಗ ಬಿಜೆಪಿಯಲ್ಲಿ VJP vs YJP vs AJP ಬಡಿದಾಟ ನಡೆಯುತ್ತಿದೆ, ಈ ಬಡಿದಾಟವನ್ನು ಮರೆಮಾಚಲು ಹೋರಾಟ ಎಂಬ ನಾಟಕ ಶುರು ಮಾಡಿಕೊಂಡಿದೆ. ನನ್ನ ಮನೆಗೆ ಮುತ್ತಿಗೆ ಹಾಕಲು ಬಿಜೆಪಿಗರನ್ನು ದಾರಾಳವಾಗಿ ಸ್ವಾಗತಿಸುತ್ತೇನೆ, ಕಾಫಿ, ಟಿ, ಬಿಸ್ಕೆಟ್ ಗಳ ಆತಿಥ್ಯವನ್ನೂ ನೀಡುತ್ತೇನೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ಹೈಕಮಾಂಡಿಗೆ ತಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ತೋರಿಸಲು ನನ್ನ ಹೆಸರಿನಲ್ಲಿ ಹೋರಾಟದ ನಾಟಕ ಆರಂಭಿಸಿದ್ದಾರೆ, ನನ್ನ ಹೆಸರಿನ ಮೂಲಕ ವಿಜಯೇಂದ್ರರವರು ಸಂಕ್ರಾಂತಿಯ ಡೆಡ್ ಲೈನ್ ದಾಟುವ ಪ್ರಯತ್ನ ನಡೆಸಿದ್ದಾರೆ. ಡಿಯರ್​ ಬಿಜೆಪಿ, ಸುಳ್ಳುಗಳ ಆಧಾರದಲ್ಲಿ ನನ್ನ ವಿರುದ್ಧ ಇಷ್ಟೆಲ್ಲಾ ಸುವ್ಯವಸ್ಥಿತವಾದ, ವಿವಿಧ ಮಾದರಿಯ ಹಾಗೂ ವ್ಯಾಪಕವಾದ ಹೋರಾಟ ಮಾಡುವ ಬದಲು ರಾಜ್ಯದ ಜನರೆದುರು ನಿಮ್ಮ ನೈತಿಕತೆಯನ್ನು ನಿರೂಪಿಸುವ ಹೋರಾಟ ಮಾಡಿ ಎಂದು ವಾಗ್ದಾಳಿ ಮಾಡಿದ್ದಾರೆ.

ಕೋವಿಡ್ ಕಾಲದಲ್ಲಿ ಹೆಣದ ಮೇಲೆ ಹಣ ಮಾಡಿ, ಭ್ರಷ್ಟಾಚಾರದಿಂದ ಸಾವಿರಾರು ಜೀವ ತೆಗೆದ ಭ್ರಷ್ಟರ ವಿರುದ್ಧ ಕಪ್ಪು ಬಾವುಟ ತೋರಿಸಿ, ಜನ ಸಮಾಧಾನವಾಗುತ್ತಾರೆ.
ವಕ್ಫ್ ವರದಿ ಮುಚ್ಚಿ ಹಾಕಲು 150 ಕೋಟಿ ರೂ. ಆಮಿಷ ಒಡ್ಡಿದ ವಿಜಯೇಂದ್ರರವರ ವಿರುದ್ಧ ಪೋಸ್ಟರ್ ಪ್ರದರ್ಶನ ಮಾಡಿ, ಜನ ಬಹುಪರಾಕ್ ಹಾಕುತ್ತಾರೆ ಎಂದಿದ್ದಾರೆ.

ಬಿಜೆಪಿ ಈ ಎಲ್ಲಾ ಕೆಲಸಗಳನ್ನು ಮಾಡಿ, ರಾಜ್ಯದ ಜನಕ್ಕೆ ನೀವು ಎಸಗಿದ ದ್ರೋಹಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ, ನಿಮಗೂ “ನೈತಿಕತೆ” ಪದದ ಅರ್ಥ ತಿಳಿದಿದೆ ಎಂಬುದನ್ನು ನಿರೂಪಿಸಿ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂಬ ಗೊಬೆಲ್ಸ್ ಸಿದ್ದಾಂತವನ್ನು ಮೆಚ್ಚಿ ನೆಚ್ಚಿಕೊಂಡಿರುವ ಬಿಜೆಪಿಗರು ಮುಂದಿನ ದಿನಗಳಲ್ಲಿ ಗೊಬೆಲ್ಸ್ ಕೂಡ ನಾಚುವಂತ ಸುಳ್ಳುಗಾರರಾಗಿ ಹೊರಹೊಮ್ಮಲಿದ್ದಾರೆ. ಅಂದಹಾಗೆ, ನನ್ನ ವಿರುದ್ಧ ಬಿಜೆಪಿ ರೂಪಿಸಿರುವ ಸುಳ್ಳುಗಳ ಈ ಟೂಲ್ ಕಿಟ್​ ತುಂಬಾ ಸೊಗಸಾಗಿದೆ ಎಂದು ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!