ಮಂದಿರವನ್ನು ಅಪವಿತ್ರ ಮಾಡಿದ ಕಿಡಿಗೇಡಿಗಳ ಸೂಕ್ತ ಕಾನೂನಿನ ಕ್ರಮಕ್ಕೆ ಬಿಜೆಪಿ ಒತ್ತಾಯ

ಹೊಸದಿಗಂತ ವರದಿ,ಕಲಬುರಗಿ:

ಜಿಲ್ಲೆಯ ಆಳಂದ ತಾಲೂಕಿನ ರಾಘವ ಚೈತನ್ಯ ಮಂದಿರದ ಶಿವಲಿಂಗವನ್ನು ಅಪವಿತ್ರ ಗೊಳಿಸದ ಘಟನೆಯೂ ಖಂಡನೀಯವಾಗಿದ್ದು, ತಪ್ಪಿಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಹಾಗೂ ಆಂದೋಲಾ ಶ್ರೀ ಮತ್ತು ಈಶ್ವರÀ ಸಿಂಗ್ ಠಾಕೂರ ಅವರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣ ವಾಪಸ್ ಪಡೆಯಬೇಕೆಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಆಗ್ರಹಿಸಿದರು.

ಸೋಮವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಲಿಂಗಕ್ಕೆ ಅಪವಿತ್ರಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಆ ಘಟನೆ ಖಂಡಿಸಿ ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಆಳಂದ ಶಾಸಕ ಸುಭಾಷ ಗುತ್ತೇದಾರ ಅವರು ಈ ಘಟನೆ ಕುರಿತು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಹಿಂದುಗಳ ಮಂದಿರಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗೂ ಈ ಕೃತ್ಯ ಎಸಗಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಶಾಸಕರ ಕುರಿತು ಕೆಲವರು ಸೊಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ನಿಂದಿಸಿ ಮೆಸೆಜ್‌ಗಳನ್ನು ಹಾಕಿದ್ದಾರೆ. ಇದರಿಂದ ಶಾಸಕರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಆಳಂದದಲ್ಲಿ ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆಯಲ್ಲಿ ಆಳಂದ ಮತ್ತು ಜೇವರ್ಗಿ ತಾಲೂಕಿನ ಕೆಲ ಮಠಾಧೀಶರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಆಂದೋಲಾದ ಶ್ರೀ ಸಿದ್ದಲಿಂಗ ಶಿವಾಚಾಯರು ಮತ್ತು ಬಿಜೆಪಿಯ ವಿಭಾಗೀಯ ಸಹ ಸಂಚಾಲಕ ಈಶ್ವರಸಿಂಗ್ ಠಾಕೂರ ಅವರ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದರು.

ಮಹಾರಾಷ್ಟçದ ಶ್ರೇಷ್ಠ ಜ್ಞಾನಿ ಸಂತ ತುಕಾರಾಮರ ಗುರುಗಳಾದ ರಾಘವ ಚೈತನ್ಯರ ಮಂದಿರದಲ್ಲಿನ ಶಿವಲಿಂಗಕ್ಕೆ ಅವಮಾನ ಮಾಡಿದ್ದನ್ನು ಖಂಡಿಸುವ ಹಕ್ಕು ಹಿಂದೂಗಳಿಗೆ ಇಲ್ಲವೇ?. ಹಿಂದೂ ದೇವಸ್ಥಾನಗಳಿಗೆ ಅಪವಿತ್ರ ಮಾಡಿದರೂ ಕೈಕಟ್ಟಿ ಕುಳಿತುಕೊಳ್ಳಬೇಕಾ ಎಂದು ಅವರು ಪ್ರಶ್ನಿಸಿದರು.

ಇಬ್ಬರ ವಿರುದ್ಧದ ಪ್ರಕರಣ ವಾಪಸ್ ಪಡೆಯಬೇಕು. ಮಂದಿರವನ್ನು ಅಪವಿತ್ರಗೊಳಿಸಿದ ಕಿಡಿಗೇಡಿಗಳನ್ನು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪಕ್ಷ ಉಗ್ರ ಹೋರಾಟ ಮಾಡಲಿದೆ ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ಬಿಜೆಪಿ ಮಾಧ್ಯಮ ವಕ್ತಾರ ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!