ಸಂಸದ ಡಿ.ಕೆ.ಸುರೇಶ್, ಎಂಎಲ್‌ಸಿ ರವಿಕುಮಾರ್ ರಾಜೀನಾಮೆಗೆ ಆಗ್ರಹ: ಬಿಜೆಪಿ ಪ್ರತಿಭಟನೆ

ಹೊಸದಿಗಂತ ವರದಿ, ಚಿತ್ರದುರ್ಗ:

ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಗೂಂಡಾಗಿರಿ ಪ್ರದರ್ಶಿಸಿದ ಸಂಸದ ಡಿ.ಕೆ.ಸುರೇಶ್ ಹಾಗೂ ಎಂಎಲ್‌ಸಿ ರವಿಕುಮಾರ್ ಅವರ ವರ್ತನೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಗೂಂಡಾಗಿರಿ ಮಾಡಿದವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ಹನುಮಂತೇಗೌಡ ಮಾತನಾಡಿ, ತ್ಯಾಗ, ಸೇವಾಮನೋಭಾವನೆಯಿಂದ ಬಂದಿರುವ ಬಿಜೆಪಿ ಪಕ್ಷಕ್ಕೆ ಕಾಂಗ್ರೇಸ್ ಪಕ್ಷದಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಕಾರ್ಯಕ್ರಮದಲ್ಲಿ ಗೂಂಡಾಗಿರಿ ಪ್ರದರ್ಶಿಸಿರುವ ಸಂಸದ ಡಿ.ಕೆ.ಸುರೇಶ್ ಮತ್ತು ಎಂಎಲ್‌ಸಿ ರವಿಕುಮಾರ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸೋಮವಾರ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್ ಗೂಂಡಾಗಿರಿ ನಡೆಸಿರುವುದು ಖಂಡನೀಯ. ಬಂಡೆ, ಗಂಧವನ್ನು ಸಾಗಾಟ ಮಾಡಿದ ಕಾಂಗ್ರೇಸ್‌ನಿಂದ ನಾಡಿನ ಜನತೆಗೆ ಏನು ಪ್ರಯೋಜನವಾಗಿದೆ. ಇಂತಹ ಪಕ್ಷದ ಸಂಸದ, ಎಂಎಲ್‌ಸಿ, ಅದರಲ್ಲೂ ಗೂಡಾವರ್ತನೆ ತೋರುವ ದುರಹಂಕಾರಿಗಳಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ರಾಮನಗರವನ್ನು ಡಿ.ಕೆ. ಸಹೋದರರು ಮತ್ತು ಎಂ.ಎಲ್.ಸಿ. ರವಿಕುಮಾರ್ ರಾವಣ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ. ಅಭಿವೃದ್ದಿಯತ್ತ ಕೊಂಡೂಯ್ಯತ್ತಿರುವ ಸಚಿವ ಅಶ್ವತ್ ನಾರಾಯಣ ವಿರುದ್ದ ಡಿ.ಕೆ. ಸಹೋದರರು ಪಿತೂರಿ ಮಾಡುತ್ತಿದ್ದಾರೆ. ಆ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದ್ದಾರೆ. ಇದು ಅಕ್ಷಚಮ್ಯ ಅಪರಾಧ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಕಿಡಿಕಾರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ ಮಾತನಾಡಿ, ಕಾರ್ಯಕ್ರಮದಲ್ಲಿ ಸಚಿವರು ಮಾತನಾಡುವಾಗ ಏಕಾಏಕಿ ಏಕವಚನದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಕಾಂಗ್ರೇಸ್‌ನ ಗೂಂಡಾ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ. ಅಂಬೇಡ್ಕರ್ ಮತ್ತು ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಈ ರೀತಿಯಾದ ದುರ್ವತನೆ ತೋರಿರುವ ಇಬ್ಬರು ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕಲ್ಲೇಶಯ್ಯ, ಜಿಲ್ಲಾ ಕಾರ್ಯದರ್ಶಿ ನರೇಂದ್ರ, ಬಿಜೆಪಿ ಯುವ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಪಿ, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಸಂಪತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕಿರಣ್, ನಗರ ಪ್ರಧಾನ ಕಾಯದರ್ಶಿ ವೆಂಕಟೇಶ್, ಎಸ್.ಸಿ. ಮೋರ್ಚಾದ ಪಾಂಡುರಂಗಪ್ಪ, ಪರಶುರಾಮ್, ನಾಗರಾಜ್ ಬೇದ್ರೆ, ಶಿವಣ್ಣಾಚಾರ್, ರವಿಕುಮಾರ್, ನಗರಸಭಾ ಸದ್ಯಸರಾದ ಹರೀಶ್, ಸುರೇಶ್, ರಮೇಶ್, ಪರಮೇಶ್, ಗೌರಮ್ಮ, ಜಯಲಕ್ಷ್ಮಿ, ನಾಗರತ್ನ, ಜಯಶೀಲ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!