ಕಾಂಗ್ರೆಸ್ ಜನಪ್ರತಿನಿಧಿಗಳ ಗೂಂಡಾ ವರ್ತನೆ: ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ

ಹೊಸದಿಗಂತ ವರದಿ,ಕುಶಾಲನಗರ:

ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ಎಂಎಲ್’ಸಿ ರವಿ ಅವರ ಗೂಂಡಾ ವರ್ತನೆಯನ್ನು ಖಂಡಿಸಿ ಮಂಡಲ ಬಿಜೆಪಿ ವತಿಯಿಂದ ಕುಶಾಲನಗರ ಗಣಪತಿ ದೇವಾಲಯ ಮುಂದೆ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಡಿ.ಕೆ.ಸುರೇಶ್, ರವಿ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಎದುರೇ ಗೂಂಡಾ ವರ್ತನೆ ತೋರಿದ ಇಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ರಾಜ್ಯದ ಮುಖ್ಯಮಂತ್ರಿ ಎದುರು ಕಾಂಗ್ರೆಸ್’ನ ಸಂಸದರು ಹಾಗೂ ಎಂಎಲ್’ಸಿ ನಡೆದುಕೊಂಡ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಗೂಂಡಾ ಪ್ರವೃತ್ತಿ ಹೊಂದಿರುವ ಈ ಇಬ್ಬರೂ ತಮ್ಮ ಸ್ಥಾನಕ್ಕೆ ಅನರ್ಹರಾಗಿದ್ದು ಕೂಡಲೇ ರಾಜೀನಾಮೆ ನೀಡಬೇಕು. ಡಿ.ಕೆ.ಶಿ ಪಟಾಲಂ‌‌ ಕೇವಲ ರಾಮನಗರಕ್ಕೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಮಾರಕ. ರಾಮನಗರ‌ದ ಮತದಾರರು ಯಾವುದೇ ರೀತಿಯಲ್ಲೂ ಆತಂಕ‌ಪಡುವ ಅಗತ್ಯವಿಲ್ಲ.‌ ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ತಮ್ಮ ನೆರವಿಗಿದ್ದಾರೆ ಎಂದು ಅಭಯ ನೀಡಿದರು.
ಮಂಡಲ ಅಧ್ಯಕ್ಷ ಮನುಕುಮಾರ್ ರೈ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್’ಗೆ ಅಭದ್ರತೆ ಕಾಡುತ್ತಿದೆ. ಕಾಂಗ್ರೆಸಿಗರ ವರ್ತನೆ ಜನರಲ್ಲಿ ಅಸುರಕ್ಷತೆ ಭಾವನೆ‌ ಮೂಡಿಸುತ್ತಿದೆ. ಬಿಜೆಪಿ ಸರಕಾರದ ಇತ್ತೀಚಿನ ಕೆಲವು‌ ನಿಷೇಧ ಕಾಯ್ದೆಗಳಿಂದ ಕಂಗಾಲಾಗಿರುವ ಕಾಂಗ್ರೆಸ್ ಈ ರೀತಿಯಲ್ಲಿ ತಮ್ಮ ಆಕ್ರೋಧ ಹೊರಹಾಕುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಮಂಡಲ ಪ್ರಮುಖರಾದ ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಉಮಾಶಂಕರ್, ಶಿವಾಜಿ, ಕೂಡಾ ಅಧ್ಯಕ್ಷ ಎಂ.ಎಂ.ಚರಣ್, ಪ್ರಮುಖರಾದ ನವನೀತ್, ಪುಷ್ಪಾ, ರುದ್ರಾಂಬೆ, ಮಧುಸೂದನ್, ಚಂದ್ರಶೇಖರ್, ವೈಶಾಖ್, ಪ್ರವೀಣ್, ಕಂಠಿ ಕಾರ್ಯಪ್ಪ, ನಿತ್ಯಾ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!