ಹೊಸ ದಿಗಂತ ವರದಿ, ಕಲಬುರಗಿ:
ಮುಂಗಾರು- ಹಿಂಗಾರು ಹಂಗಾಮಿನ ಮಳೆ ಸಂಪೂರ್ಣ ಕೈ ಕೊಟ್ಟು ವ್ಯಾಪಕ ಬರಗಾಲ ಆವರಿಸಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಅರಿಯಲು ಭಾರತೀಯ ಜನತಾ ಪಕ್ಷ ನ.7 ರಂದು ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಲಿದೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡ ಜಿಲ್ಲೆಯ ವಿವಿಧೆಡೆ ಸಂಚರಿಸಿ ಬರದ ವಾಸ್ತವ ಸ್ಥಿತಿ ಗತಿ ಅರಿಯಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿ ರೈತಾಪಿ ವರ್ಗ ಹಾಗೂ ಜನಸಾಮಾನ್ಯರು ಕಂಗಾಲಾಗಿದ್ದರೂ ಆಡಳಿತರೂಢ ಕಾಂಗ್ರೆಸ್ ಸರ್ಕಾರ ತಕ್ಷಣ ನೆರವಿಗೆ ಧಾವಿಸುವುದನ್ನು ಬಿಟ್ಟು ಬರೀ ಖುರ್ಚಿ ಉಳಿಸಿಕೊಳ್ಳುವಲ್ಲಿಯೇ ಮಗ್ನರಾಗಿರುವುದು ನಿಜಕ್ಕೂ ನಾಚಿಗೇಡಿತನದ ಸಂಗತಿಯಾಗಿದೆ. ಸರ್ಕಾರದ ಕಣ್ಣು ತೆರೆಸಲು ಹಾಗೂ ಜನ ಸಾಮಾನ್ಯರ ಸಂಕಷ್ಟ ಅರಿಯಲು ಬಿಜೆಪಿ ಬರ ಅಧ್ಯಯನ ತಂಡೋಪಗಳಾಗಿ ಪ್ರವಾಸಗೈದು ವರದಿಯನ್ನು ರಾಜ್ಯಪಾಲರ ಮೂಲಕ ಸಲ್ಲಿಸಲು ಮುಂದಾಗಿದೆ ಎಂದು ವಿವರಿಸಿದ್ದಾರೆ.
ಮುಖಂಡ ವಿಜಯೇಂದ್ರ ನೇತೃತ್ವದ ತಂಡವು ನ. 7ರಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಪಟ್ಟಣ, ಅಫಜಲಪುರ ವಿಧಾನಸಭಾ ಕ್ಷೇತ್ರದ ಫರಹತಾಬಾದವಲ್ಲದೇ ಜೇವರ್ಗಿ ಕ್ಷೇತ್ರದ ಸೊನ್ನ ಸೇರಿ ಇತರೆಡೆ ಸಂಚರಿಸಿ ರೈತರ ಸಮಸ್ಯೆಗಳನ್ನು ಆಲಿಸಲಿದೆ. ಅದೇ ರೀತಿ ಕಲಬುರಗಿ ಯಲ್ಲೂ ರೈತರೊದಿಗೆ ಸಂವಾದ ನಡೆಸಲಿದೆ ಎಂದು ತೇಲ್ಕೂರ ತಿಳಿಸಲಿದ್ದಾರೆ.
ಬರ ಅಧ್ಯಯನ ತಂಡದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ ಜಾಧವ್ ಸೇರಿದಂತೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಶಾಸಕರಾದ ಪ್ರಭು ಚವ್ಹಾಣ, ಅವಿನಾಶ ಜಾಧವ್, ಬಸವರಾಜ ಮತ್ತಿಮಡು, ಶರಣು ಸಲಗರ, ಸುನೀಲ ವಲ್ಲಾಪುರೆ, ಶಶೀಲ್ ನಮೋಶಿ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಸುಭಾಷ ಗುತ್ತೇದಾರ, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜೀ ಪಾಟೀಲ್ ಸೇರಿ ಇತರರಿಲಿದ್ದಾರೆ.