Friday, June 2, 2023

Latest Posts

ಹಳೇ ಮೈಸೂರು ಭಾಗದತ್ತ ಬಿಜೆಪಿ ಕಣ್ಣು: ಏ. 30ರಂದು ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಆಗಮನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ (BJP) ನಾಯಕರು,ತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಬಿಜೆಪಿ ಏಪ್ರಿಲ್ 30ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಮುಂದಾಗಿದ್ದು, ಖುದ್ದು ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಬಳಿ ಸುಮಾರು ಮೂವತ್ತು ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಯಲಿದೆ. ಎರಡರಿಂದ ಮೂರು ಲಕ್ಷಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ವೇದಿಕೆ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗುತ್ತಿದೆ. ಸ್ಥಳಕ್ಕೆ ತೆರಳಿರುವ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಪರಿಶೀಲನೆ ನಡೆಸಿದ್ದಾರೆ. ರಾಮನಗರ, ಮಂಡ್ಯ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

ಸಮಾವೇಶದ ಸಿದ್ಧತೆ ಬಗ್ಗೆ ಸಿಪಿ ಯೋಗೇಶ್ವರ್ ಮಾಹಿತಿ ನೀಡಿ, ರೋಡ್​ ಶೋ ಇರುವುದಿಲ್ಲ. ವೇದಿಕೆಯಲ್ಲಷ್ಟೇ ಸುಮಾರು ಒಂದೂವರೆಯಿಂದ ಎರಡು ಗಂಟೆಯಷ್ಟು ಸಮಯ ಸಮಾವೇಶ ನಡೆಯಲಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷದ ಹೆಚ್ಚು ಅಭ್ಯರ್ಥಿಗಳು ಗೆಲ್ಲಬೇಕೆಂಬುದು ಬಿಜೆಪಿಯ ಬಯಕೆಯಾಗಿದೆ. ಕಳೆದ ತಿಂಗಳು ಪ್ರಧಾನಿ ಮೋದಿಯವರು ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇ ಲೋಕಾರ್ಪಣೆಗೊಳಿಸಿದ್ದರು. ಅಮಿತ್ ಶಾ ಅವರೂ ಮಂಡ್ಯ ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದರು. ವಿವಿಧ ಅಭಿಯಾನಗಳೊಂದಿಗೆ ಪಕ್ಷ ಸಂಘಟನೆ ಕೆಲಸ ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ಪ್ರಧಾನಿಯವರು ಚನ್ನಪಟ್ಟಣಕ್ಕೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.

ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮೋದಿ ಅವರನ್ನು ಹಲವು ಬಾರಿ ರಾಜ್ಯಕ್ಕೆ ಕರೆಸಿಕೊಂಡು ಪ್ರಚಾರ ನಡೆಸುವ ಉದ್ದೇಶ ಬಿಜೆಪಿಯದ್ದಾಗಿದೆ. ಮೋದಿ ಅವರ ಜನಪ್ರಿಯತೆಯನ್ನು ಬಳಸಿಕೊಂಡು ರಾಜ್ಯದಲ್ಲಿ ಮರಳಿ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ಶತಾಯಗತಾಯ ಯತ್ನಿಸುತ್ತಿದೆ. ಇದಕ್ಕಾಗಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿವುಸುವ ಗುರಿಹಾಕಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!