ಡಿ.30ರಂದು ಬಿಜೆಪಿ ಬೃಹತ್‌ ಸಮಾವೇಶ:1 ಲಕ್ಷ ಜನ ಭಾಗವಹಿಸುವ ಸಾಧ್ಯತೆಯಿದೆ ಎಂದ ಸೋಮಶೇಖರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಡ್ಯದಲ್ಲಿ ಡಿಸೆಂಬರ್ 30ರಂದು ಬಿಜೆಪಿ ಬೃಹತ್‌ ಸಮಾವೇಶ ಆಯೋಜಿಸಿದ್ದು, 1 ಲಕ್ಷ ಜನರ ಭಾಗವಹಿಸುವ ನಿರೀಕ್ಷಯಿದೆ ಎಂದು ರಾಜ್ಯದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು. ಈ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಲಿದ್ದು, ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನಗಳ ಜನರು ಸಮಾವೇಶದಲ್ಲಿ ಭಾಗವಹಿಸುವರು. ಅಮಿತ್ ಶಾ ಅವರ ಭೇಟಿಯಿಂದ ಬಿಜೆಪಿ ಬಲ ಮತ್ತಷ್ಟು ಹೆಚ್ಚಲಿದೆ. ಮಂಡ್ಯ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.

2023ರ ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತು ಹಾಸನ ಭಾಗದಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರು ಗೆಲ್ಲಬೇಕೆಂಬ ಗುರಿ ನಮ್ಮದು. ಪಕ್ಷ ಬಲಪಡಿಸಲು ವಿಶೇಷ ಗಮನ ಕೊಡುತ್ತಿದ್ದೇವೆ. ಸಮಾವೇಶ ಬಳಿಕ ಸಂಜೆ 5.30ಕ್ಕೆ ಬೆಂಗಳೂರಿನ ಪ್ಯಾಲೇಸ್‍ನಲ್ಲಿ ಸಹಕಾರ ಕ್ಷೇತ್ರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 24 ಸಾವಿರ ಕೋಟಿ ಸಾಲ ನೀಡುವ ಕಾರ್ಯಕ್ರಮ ನಡೆಯಲಿದೆ. ಯಶಸ್ವಿನಿ ಯೋಜನೆಗೆ 20 ಲಕ್ಷ ಜನರು ನೋಂದಾವಣೆ ಆಗಿದ್ದಾರೆ. ಯೋಜನೆಗೆ ಜನವರಿ ಒಂದರಿಂದ ಮರು ಚಾಲನೆ ನೀಡುವ ಕಾರ್ಯವನ್ನು ಅಮಿತ್ ಶಾ ಅವರು ಉದ್ಘಾಟಿಸುತ್ತಾರೆ.

ಸಕ್ಕರೆ ಕ್ಷೇತ್ರ ಬಲಿಷ್ಠಗೊಳಿಸಲು ಅಮಿತ್ ಶಾ ಅವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸುಮಾರು 5,700 ವಿಎಸ್‍ಎಸ್‍ಗಳಿಗೆ, ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಲಭಿಸಿದ ಪ್ರಯೋಜನವನ್ನು ಪರಿಶೀಲಿಸುವರು. 31ರಂದು ಮಲ್ಲೇಶ್ವರದ ಸೌಹಾರ್ದ ಫೇಡರೇಶನ್‍ಗೆ ಭೇಟಿ ಕೊಡುತ್ತಾರೆ. ಸೌಹಾರ್ದ ಸಹಕಾರಿಗಳ ಸಭೆ ನಡೆಸುತ್ತಾರೆ ಎಂದು ವಿವರಿಸಿದರು. ನಬಾರ್ಡ್‍ನಿಂದ ಕೊಡುವ 24 ಸಾವಿರ ಕೋಟಿ ಸಾಲವನ್ನು ದ್ವಿಗುಣಗೊಳಿಸಲು ಮುಖ್ಯಮಂತ್ರಿಯವರು ಯೋಜಿಸಿದ್ದಾರೆ. ಆ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಹಣಕಾಸು ವ್ಯವಹಾರದಲ್ಲಿ ಬಲಪಡಿಸಲು ಚಿಂತಿಸುತ್ತಿದ್ದು, ರೈತರಿಗೆ ಹೆಚ್ಚಿನ ಸಾಲ ನೀಡುವ ಕುರಿತು ತಿಳಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!