ಕಾರ್ಮಿಕ ಮಹಿಳೆಗೆ ಒಲಿದ ಬೆಳಗಾವಿ ಪಾಲಿಕೆ ಮೇಯರ್ ಪಟ್ಟ, ಇತಿಹಾಸ ಸೃಷ್ಟಿಸಿದ ಬಿಜೆಪಿ….!

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಮಹಾನಗರ ಪಾಲಿಕೆಯ ಎರಡನೇ ಅವಧಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿದೆ.
ಬಡ ಕೂಲಿಕಾರರ ಕುಟುಂಬದ ಹಾಗೂ ಕಾರ್ಮಿಕ ಮಹಿಳೆ ಸವಿತಾ ಕಾಂಬಳೆ 22ನೇ ಮಹಾಪೌರ ಹುದ್ದೆ ಅಲಂಕರಿಸಿದ್ದಾರೆ.

ಉಪಮೇಯರಾಗಿ ಆನಂದ ಚವ್ಹಾಣ ಆಯ್ಕೆಯಾದರು. 35 ಸದಸ್ಯ ಬಲವನ್ನು ಹೊಂದಿರುವ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಹೀಗಾಗಿ ಸಹಜವಾಗಿಯೇ ಬಿಜೆಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಅಲ್ಲದೇ, ಸವಿತಾ ಕಾಂಬಳೆ ಅವರು ಬರೋಬರಿ ಐದು ವರ್ಷದ ಬಳಿಕ ಪಾಲಿಕೆಯಲ್ಲಿ ಕನ್ನಡ ಭಾಷಿಕ ಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಪರಿಶಿಷ್ಟ ಜಾತಿ ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಸವಿತಾ ಜಯಪಾಲ ಕಾಂಬಳೆ ಹಾಗೂ ಲಕ್ಷ್ಮಿ ರಾಠೋಡ್ ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ ಆನಂದ ಚವಾಣ, ಮಾಧವಿ ರಾಗೋಚೆ,‌ ಜ್ಯೋತಿ ಕಡೋಲಕರ, ಶಾಮುಬಿ ಪಠಾಣ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ವರಿಷ್ಠರ ಸೂಚನೆಯಂತೆ ಲಕ್ಷ್ಮೀ ರಾಠೋಡ ನಾಮಪತ್ರ ಹಿಂಪಡೆದರು. ಹೀಗಾಗಿ ಮೇಯರ್ ಆಗಿ ಸವಿತಾ ಕಾಂಬಳೆ ಹಾಗೂ ಉಪಮೇಯರ್‌ ಆಗಿ ಆನಂದ ಚವಾಣ ಅವಿರೋಧ ಆಯ್ಕೆಯಾದರು.

ಚುನಾವಣಾ ಉಸ್ತುವಾರಿ ಯಾಗಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ, ಸಂಸದೆ ಮಂಗಲಾ ಅಂಗಡಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ್ ಬೆನಕೆ, ಮುಖಂಡರಾದ ವೀರೇಶ ಕಿವಡಸಣ್ಣನವರ ಹಾಗೂ ಅನೇಕರು ಉಪಸ್ಥಿತರಿದ್ದರು.

ಪ್ರಾದೇಶಿಕ‌ ಆಯುಕ್ತರಾದ ಎಸ್.ಬಿ.‌ ಶೆಟ್ಟೆನ್ನವರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.‌ ಜಂಟಿ ಪ್ರಾದೇಶಿಕ ಆಯುಕ್ತ ಎಸ್.ಎಸ್. ಬಿರಾದಾರ, ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತೆ ರಾಜಶ್ರೀ ಜೈನಾಪುರೆ ಸಹಾಯಕ ಆಯುಕ್ತ ಉಮೇಶ್ ತಳವಾರ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!