Friday, June 2, 2023

Latest Posts

ಜಗದೀಶ್​ ಶೆಟ್ಟರ್, ಸವದಿಯಂತಹ ಹತ್ತು ನಾಯಕರನ್ನು ಸೃಷ್ಟಿಸುವ ಶಕ್ತಿ ಬಿಜೆಪಿಗಿದೆ: ಜಾರಕಿಹೊಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿಯಂತವರು ಪಕ್ಷ ಬಿಟ್ಟು ಹೋಗುವುದರಿಂದ ಬಿಜೆಪಿ ಸ್ವಚ್ಛವಾಗುತ್ತದೆ. ಇಂತಹ ಹತ್ತು ನಾಯಕರನ್ನು ತಯಾರಿಸುವ ಶಕ್ತಿ ಪಕ್ಷಕ್ಕಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಭಾನುವಾರ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಸೋತ ವ್ಯಕ್ತಿಯನ್ನು ಪಕ್ಷ ಡಿಸಿಎಂ ಮಾಡಿತ್ತು. ಆದರೆ ಈಗ ಪಕ್ಷ ಬಿಟ್ಟು ಹೋಗಿ ಪಕ್ಷದ ಬಗ್ಗೆ ಕೀಳಾಗಿ ಮಾತಾಡುತ್ತಿದ್ದಾರೆ. ಜಗದೀಶ ಶೆಟ್ಟರ್​ ಎಲ್ಲ ಹುದ್ದೆಗಳನ್ನು ಅನುಭವಿಸಿದವರು. ಎಲ್.ಕೆ.ಅಡ್ವಾಣಿ ಅವರಷ್ಟು ಇವರು ಯಾರೂ ತ್ಯಾಗ ಮಾಡಿದವರಲ್ಲ ಎಂದರು.

ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷ ಬಿಟ್ಟು ಹೋಗಿದ್ದಾರೆ ಅಂತಾ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿ ನಾಯಕರ ಪಕ್ಷ ಅಲ್, ಕಾರ್ಯಕರ್ತರ ಪಕ್ಷ. ಒಬ್ಬ ಲೀಡರ್ ಹೋಗಬಹುದು, ಅಂತಹ 10 ನಾಯಕರನ್ನು ತಯಾರಿಸುವ ಶಕ್ತಿ ಬಿಜೆಪಿ ಪಕ್ಷಕ್ಕಿದೆ‌. ಹೀಗಾಗಿ ಯಾರೂ ಹೆದರಬೇಡಿ. ಇಂತಹ ಎಷ್ಟೋ ನಾಯಕರು ಹೋಗುತ್ತಾರೆ, ಹೋಗಲಿ, ಒಮ್ಮೆ ಪಕ್ಷ ಸ್ವಚ್ಛವಾಗುತ್ತದೆ. ಎಲ್ಲ ಸ್ವಚ್ಛ ಮಾಡಿ, ಕಾರ್ಯಕರ್ತರನ್ನೇ ನಾಯಕರನ್ನಾಗಿ ಮಾಡೋಣ ಎಂದು ಹೇಳಿದರು.

ಬೆಂಗಳೂರಿನಲ್ಲಿ 28 ಸ್ಥಾನಗಳಿದ್ದರೆ, ಬಳಿಕ ಅತೀ ಹೆಚ್ಚು ಸ್ಥಾನ‌ವಿರುವ ಬೆಳಗಾವಿ ಜಿಲ್ಲೆಯಲ್ಲಿ‌ 15 ಕ್ಷೇತ್ರಗಳಲ್ಲಿ ಬಿಜೆಪಿ‌ ಗೆಲ್ಲಿಸಲು ದೃಢ ಸಂಕಲ್ಪ ಮಾಡಬೇಕಿದೆ. ಆ ನಿಟ್ಟಿನಿಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಕರೆ ನೀಡಿದರು. ವಿಶೇಷವಾಗಿ ಅಥಣಿ ಕ್ಷೇತ್ರಕ್ಕೆ ನಾವು ಹೆಚ್ಚು ಒತ್ತು ಕೊಡಬೇಕು. ಅಥಣಿಯಲ್ಲಿ ಬಿಜೆಪಿ ಬಾವುಟ ಹಾರಿಸಲೇಬೇಕು ಎಂದು ದೃಢ ಸಂಕಲ್ಪ ಮಾಡಿದ್ದು, ಅದನ್ನು ನಾವು ಮಾಡಿಯೇ ತೀರುತ್ತೇವೆ ಎಂದರು.

ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್, ಧನಂಜಯ ಜಾಧವ, ಕಿರಣ ಜಾಧವ ಸೇರಿ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!