ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯಿಂದ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ಮುಂದುವರೆದಿದ್ದು, ರಾತ್ರಿಯಾದರೂ ಮಾಜಿ ಸಿಎಂ ಯಡಿಯೂರಪ್ಪ ಉತ್ಸಾಹದಲ್ಲೇ ಧರಣಿಯಲ್ಲಿ ಕೂತಿದ್ದಾರೆ. ಹಿರಿಯ ಬಿಜೆಪಿ ಮುಖಂಡರೂ ಸಾಥ್ ನೀಡಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದಲೂ ಯಡಿಯೂರಪ್ಪ ಭಾಗವಹಿಸಿದ್ದು, ರಾತ್ರಿಯಾದರೂ ಧರಣಿ ಮುಂದುವರೆಸಿದ್ದಾರೆ. ಇತರ ಬಿಜೆಪಿ ನಾಯಕರೂ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಬಿಜೆಪಿ ಅಹೋರಾತ್ರಿ ಧರಣಿಗೆ ಯತ್ನಾಳ್ ಟೀಂ ಜೊತೆ ಗುರುತಿಸಿಕೊಂಡಿದ್ದ ಶಾಸಕ ಬಿ.ಪಿ.ಹರೀಶ್ ಆಗಮಿಸಿದ್ದಾರೆ. ಇವರಿಗೆ ಬಿಜೆಪಿಯು ಇತ್ತೀಚೆಗಷ್ಟೇ ಶೋಕಾಸ್ ನೊಟೀಸ್ ನೀಡಿತ್ತು. ಧರಣಿಗೆ ಆಗಮಿಸಿದ ಬಿ.ಪಿ.ಹರೀಶ್ಗೆ ವಿಜಯೇಂದ್ರ ಬೆಂಬಲಿಗನೋರ್ವ ಇರಿಸುಮುರಿಸು ಉಂಟು ಮಾಡಿದ ಘಟನೆ ನಡೆಯಿತು. ಹರೀಶ್ ಎದುರೇ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಅಂತ ಘೋಷಣೆ ಕೂಗಿರುವುದು ಕಂಡುಬಂತು.
ಇತ್ತ ಕಾಂಗ್ರೆಸ್ ವಿರುದ್ಧದ ಹೋರಾಟದಲ್ಲಿ ವಿಜಯೇಂದ್ರ, ಯಡಿಯೂರಪ್ಪರನ್ನು ಮಾಜಿ ಶಾಸಕರಾದ ನಡಹಳ್ಳಿ, ರೇಣುಕಾಚಾರ್ಯ, ಜೀವರಾಜ್ ಗುಣಗಾನ ಮಾಡಿದರು. ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ವಿಜಯೇಂದ್ರಗೆ ಲಕ್ಷಾಂತರ ಜನರ ಬೆಂಬಲವಿದೆ. ಸ್ವಾರ್ಥ ಬಿಡಬೇಕು. ವಿಜಯೇಂದ್ರ ಅವರೇ ಮುನ್ನುಗ್ಗಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.