ಹೊಸದಿಗಂತ ವರದಿ ಶಿವಮೊಗ್ಗ:
ಭಾರತೀಯ ಜನತಾ ಪಕ್ಷ ಅಸಹಾಯಕ ಸ್ಥಿತಿ ಇದೆ. ಹೇಳೋರು ಇಲ್ಲ. ಕೇಳೋರು ಇಲ್ಲ. ಕೇಂದ್ರ ನಾಯಕರ ಮುಂದೆ ಮಾತನಾಡಲು ಇಲ್ಲಿನ ನಾಯಕರಿಗೆ ಧೈರ್ಯವಿಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಾಂವಿಧಾನಿಕ ಹುದ್ದೆಗಳಾದ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನುನೇಮಿಸಲು ಆಗಿಲ್ಲ. ಆದರೂ ಸರ್ಕಾರ ಬಿದ್ದು ಹೋಗುತ್ತದೆ ಎಂದು ಟೀಕೆ ಮಾಡುತ್ತಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ಯಡಿಯೂರಪ್ಪನವರಂತಹ ದಿಟ್ಟನಾಯಕರನ್ನು ಮೂಲೆ ಗುಂಪು ಮಾಡಿಕೊಂಡು ಕಾಂಗ್ರೆಸ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಲ್ಲಿರುವ ನೀರಾವರಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೀರಾವರಿ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಬರ ತೀವ್ರವಾಗಿದ್ದರೂ ಕೂಡ ಪ್ರಧಾನಿ ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸುತ್ತಿಲ್ಲ ಎಂದರು.
ಶಿವಮೊಗ್ಗದ ಮೂಲೆಯಲ್ಲಿ ಎಲ್ಲೋ ಒಂದು ಕಡೆ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಅದನ್ನು ಮತ್ತೆಮತ್ತೆ ಕೆದಕುವ ಯತ್ನ ಮಾಡುತ್ತಿದ್ದಾರೆ. ನಗರ ಶಾಂತಿಯಿಂದ ಇರುವುದು ಇವರಿಗೆ ಇಷ್ಟವಿಲ್ಲ. ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ.
ಜವಾಬ್ದಾರಿಯುತ ವಿರೋಧಪಕ್ಷವಾಗಿ ನಡೆದುಕೊಳ್ಳಬೇಕಿದೆ. ಸಾಂವಿಧಾನಿಕ ಹುದ್ದೆ ಯಾವುದಿದೆ ಎಂಬುದೇ ಗೊತ್ತಿಲ್ಲ. ಅಧಿಕಾರ ಹೊಗುತ್ತಿದ್ದಂತೆ ಇವರಿಗೆ ಬೆದರಿಕೆ ಕರೆಗಳು ಬರುತ್ತವೆ. ದುಬೈಯಿಂದ ಯಾರು ಇವರಿಗೆ ಕರೆ ಮಾಡುತ್ತಾರೆಂಬುದೇ ಗೊತ್ತಿಲ್ಲ. ಸಣ್ಣ ರಾಜಕೀಯ ಮಾಡುವುದು ಬಿಟ್ಟು ಈಶ್ವರಪ್ಪನವರು ದೊಡ್ಡ ನಾಯಕರಾಗಿ ಹೊರಹೊಮ್ಮಲಿ ಎಂದು ಚಾಟಿ ಬೀಸಿದರು.