ಮರಣದ ನಂತರವೂ ಸಮಾಜಸೇವೆ: ಕ್ಷೌರಿಕ ಕುಟುಂಬದಿಂದ ದೇಹದಾನ

ಹೊಸದಿಗಂತ ವರದಿ ಅಂಕೋಲಾ:

ಕ್ಷೌರಿಕ ವೃತ್ತಿಯ ಮೂಲಕ ಜೀವನ ನಿರ್ವಹಣೆ ನಡೆಸುವ ವ್ಯಕ್ತಿಯೋರ್ವರ ಕುಟುಂಬ ವೈದ್ಯಕೀಯ ಕ್ಷೇತ್ರಕ್ಕೆ ಅನುಕೂಲ ಆಗುವಂತೆ ಸ್ವಯಂ ಪ್ರೇರಣೆಯಿಂದ ತಮ್ಮ ದೇಹದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕಾರವಾರ ಅಮದಳ್ಳಿ ನಿವಾಸಿ ನಾಗೇಶ ಮಹಾಲೆ ಅವರು ಸುಮಾರು ಎರಡು ದಶಕಗಳಿಂದ ಅಂಕೋಲಾ ತಾಲೂಕಿನಲ್ಲಿ ಹೇರ್ ಕಟಿಂಗ್ ಸಲೂನ್ ನಡೆಸುತ್ತಿದ್ದು ಪ್ರಸ್ತುತ ಪಟ್ಟಣದ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ ವಂದೇ ಮಾತರಂ ಎಂಬ ಹೆಸರಿನ ಸಲೂನ್ ನಡೆಸುತ್ತಿರುವ ಇವರು ತಮ್ಮ ಶಿಸ್ತು ಬದ್ಧ ಪ್ರಾಮಾಣಿಕ ಕೆಲಸದಿಂದಾಗಿ ಜನಪ್ರಿಯತೆ ಪಡೆದಿದ್ದಾರೆ.

ಯಾವುದೇ ಕೆಲಸವನ್ನು ಕೇವಲ ಹಣ ಗಳಿಸುವ ಉದ್ದೇಶದಿಂದ ಮಾತ್ರ ಮಾಡಬಾರದು ಎನ್ನುವ ಮನೋಭಾವ ಹೊಂದಿರುವ ಇವರು ವಿಕಲಚೇತನರಿಗೆ ಹಣ ಪಡೆಯದೇ ಉಚಿತ ಸೇವೆ ನೀಡುತ್ತ ಬಂದಿದ್ದಾರೆ.
ರಾಷ್ಟ್ರದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ನಾಗೇಶ ಮಹಾಲೆ ಅವರು ತಮ್ಮ ದುಡಿಮೆಯಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ದೇಶದ ಸೈನಿಕರ ಕಲ್ಯಾಣ ನಿಧಿಗೆ ನೀಡುವ ಮೂಲಕ ಮಾದರಿಯಾಗಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿ ಆಗಿರುವ ಮೋದಿಯವರ ಕರೆಯಂತೆ ಸ್ವಚ್ಛತಾ ಅಭಿಯಾನ, ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಸಹಾಯ ಸೇರಿದಂತೆ ಹಲವಾರು ಸಮಾಜ ಸೇವಾ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ಯಾವುದೇ ರೀತಿಯ ಪ್ರಚಾರ ಪಡೆಯದೇ ತಮ್ಮ ಕಾಯಕದಲ್ಲಿ ತೊಡಗಿಕೊಂಡವರು.

ಗುಜರಾತಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಜನ್ಮ ತಾಳಿದ ಮನೆಗೆ ಭೇಟಿ ನೀಡಿ ನಮಸ್ಕರಿಸಿ ಬಂದ ಇವರ ಕೈ ಮೇಲೆ ನರೇಂದ್ರ ಮೋದಿ ಅವರ ಹಚ್ಚೆಯನ್ನು ಕಾಣಬಹುದಾಗಿದೆ.
ಮರಣದ ನಂತರವೂ ತಮ್ಮ ದೇಹ ವೈದ್ಯಕೀಯ ಅಧ್ಯಯನಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ದೇಹದಾನ ಮಾಡುವ ಇವರ ನಿರ್ಧಾರಕ್ಕೆ ಪತ್ನಿ ನಯನಾ ನಾಗೇಶ ಮಹಾಲೆ ಮತ್ತು 24 ರ ಹರೆಯದ ಪುತ್ರ ನಾಗೇಂದ್ರ ನಾಗೇಶ ಮಹಾಲೆ ತಾವು ಸಹ ದೇಹದಾನ ಮಾಡುವ ಸಂಕಲ್ಪದ ಮೂಲಕ ಜೊತೆ ನೀಡಿದ್ದು ಮೂವರು ಸಹ ದೇಹದಾನ ಮಾಡುವುದಾಗಿ ಘೋಷಿಸಿ ಕಿಮ್ಸ್ ನಿರ್ದೇಶಕ ಡಾ ಗಜಾನನ ನಾಯಕ ಅವರಿಂದ ಆ ಕುರಿತು ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!