Sunday, October 2, 2022

Latest Posts

ಅ.2ರವರೆಗೆ ಸೇವಾ ಪಾಕ್ಷಿಕ ಆಚರಣೆಗೆ ಬಿಜೆಪಿ ಸಿದ್ಧತೆ

ಹೊಸದಿಗಂತ ವರದಿ ಕಲಬುರಗಿ:

ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸೆ.17ರಿಂದ ಅಕ್ಟೋಬರ್‌ 2ರವರೆಗೆ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದರು.

ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸೆ.17ರಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ದೇಶಾದ್ಯಂತ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಜೊತೆಗೆ, ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಣಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.

ಆಜಾದಿ ಕಾ ಅಮೃತ ಮಹೋತ್ಸವ್ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ 75 ಕೆರೆಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಪೂರಕವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನದಿ, ಕೆರೆ, ಬಾವಿಗಳ ಸ್ವಚ್ಛತಾ ಕಾರ್ಯ ಕೈಗೊಂಡು, ಸಸಿಗಳನ್ನು ನೆಡಲಿದ್ದಾರೆ ಎಂದು ಸಂಸದ ಡಾ.ಜಾಧವ್ ಮಾಹಿತಿ ನೀಡಿದರು.

2025ರ ಹೊತ್ತಿಗೆ ಭಾರತವನ್ನು ಕ್ಷಯ ಮುಕ್ತ ದೇಶವಾಗಿ ಸದೃಢಗೊಳಿಸುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು ಸೇವಾ ಪಾಕ್ಷಿಕದ ಅವಧಿಯಲ್ಲಿ ಐವರು ಕ್ಷಯ ರೋಗಿಗಳಿಗೆ ಮಾರ್ಗದರ್ಶನ ಹಾಗೂ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಿದ್ದಾರೆ ಎಂದು ವಿವರಿಸಿದರು.

ಇದರ ಜೊತೆಗೆ, ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಪ್ರಧಾನಿ ಮೋದಿಯವರ ಜೀವನದ ಪರಿಚಯ ಮಾಡಿಕೊಡುವ ಪ್ರದರ್ಶನ ಹಮ್ಮಿಕೊಳ್ಳಲಾಗುವುದು. ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ ಕೈಗೊಂಡ ಜನಕಲ್ಯಾಣ ಯೋಜನೆಗಳ ಕುರಿತಾದ ಪುಸ್ತಕ ಪ್ರದರ್ಶನ ನಡೆಯಲಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದು, ಎಲ್ಲ ಮಂಡಲಗಳಲ್ಲಿ ಎರಡುದ ದಿನಗಳ ಕಾಲ ಸ್ವಚ್ಛತಾ ಅಭಿಯಾನ, ಮಳೆ ನೀರಿನ ಸಂಗ್ರಹದ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಸೆ.25ರಂದು ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿ ಆಚರಿಸಲಾಗುವುದು. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಸ್ವದೇಶಿ, ಆತ್ಮನಿರ್ಭರತೆ, ಸರಳತೆ ಮತ್ತು ಶುಚಿತ್ವದ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಬಿಜೆಪಿ ಮಾಧ್ಯಮ ಸಂಚಾಲಕ ಚಂದ್ರಶೇಖರ ರೆಡ್ಡಿ, ಕೆಕೆಆರಡಿಬಿ ಅಧ್ಯಕ್ಷ,ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!