ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಗೆ ಬಿಜೆಪಿ ಸರ್ಕಾರದ ಆಡಳಿತ ಕಾರಣ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದರು.
ಹರಿಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆ ಕರ್ನಾಲ್‌ನ ಅಸ್ಸಾಂದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಗಾ, ನಿರುದ್ಯೋಗ ಸಮಸ್ಯೆಗಳ ಕುರಿತು ಮಾತನಾಡುತ್ತಾ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಹರಿಯಾಣ ಯುವಕರು ಏಕೆ ಅಮೆರಿಕ್ಕೆ ಹೋಗುತ್ತಿದ್ದಾರೆ ಗೊತ್ತೇ? ಎಂದು ಪ್ರಶ್ನೆ ಮಾಡಿದರು.
ಇತ್ತೀಚೆಗೆ ನಾನು ಯುಎಸ್‌ನ ಡಲ್ಲಾಸ್‌ಗೆ ಭೇಟಿ ನೀಡಿದ್ದೆ. ಅಲ್ಲಿ ಹರಿಯಾಣದಿಂದ ವಲಸೆ ಹೋಗಿದ್ದ ಹಲವಾರು ಯುವಕರನ್ನು ಭೇಟಿಯಾದೆ. ಅವರ ವಲಸೆಗೆ ಬಿಜೆಪಿ ಸರ್ಕಾರದ ಆಡಳಿತವೇ ಕಾರಣ ಎಂದು ದೂರಿದರು.
ಒಂದೇ ರೂಮ್‌ನಲ್ಲಿ 15 ರಿಂದ 20 ಜನ ಮಲಗಿದ್ದನ್ನು ನೋಡಿದೆ. ಅಲ್ಲೊಬ್ಬ ಯುವಕ ಅಮೆರಿಕಕ್ಕೆ ಬರೋದಕ್ಕಾಗಿಯೇ ಸುಮಾರು 30 ರಿಂದ 50 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಮತ್ತೊಬ್ಬ ಯುವಕ ತಮ್ಮ ಭೂಮಿಯನ್ನೇ ಮಾರಾಟ ಮಾಡಿರುವುದಾಗಿ ಹೇಳಿಕೊಂಡರು. ಇನ್ನೂ ಕೆಲವರು ಇಲ್ಲಿ ಕೆಲಸ ಗಿಟ್ಟಿಕೊಳ್ಳಲು ಪಟ್ಟ ಹರಸಾಹಸಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು. ಅದೇ ರೀತಿ ಕರ್ನಾಲ್‌ನ ಮನೆಯೊಂದಕ್ಕೆ ಭೇಟಿ ನೀಡಿದ್ದಾಗ ಅಮೆರಿಕದಲ್ಲಿ ಕೆಲಸಮಾಡುತ್ತಿದ್ದ ಇಲ್ಲಿನ ಯುವಕ ಕುಟುಂಬಸ್ಥರಿಗೆ ಕರೆ ಮಾಡಿದ್ದ, ಆತನ ಮಗು ವೀಡಿಯೋ ಕರೆಯಲ್ಲಿ ಮಾತನಾಡುತ್ತಾ ನಮ್ಮೂರಿಗೆ ವಾಪಸ್ ಬನ್ನಿ ಅಂತ ಚೀರಾಡುತ್ತಿತ್ತು. ಇದೆಲ್ಲವನ್ನೂ ನೋಡಿದಾಗ ಹರಿಯಾಣ ಸರ್ಕಾರ ತನ್ನ ರಾಜ್ಯ ಮತ್ತು ಇಲ್ಲಿನ ಯುವ ಜನತೆಯನ್ನು ಮಗಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೇ ಇಲ್ಲಿನ ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಿಡಿ ಕಾರಿದರು.
ಇದೇ ವೇಳೆ ರಾಹುಲ್ ಗಾಂಧಿ ಹರಿಯಾಣಕ್ಕೆ ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಪುನರುಚ್ಚರಿಸಿದರು. ತಮ್ಮ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು